ಏರ್ ಪ್ಯುರಿಫೈಯರ್‌ಗಳೆಷ್ಟು ಪರಿಣಾಮಕಾರಿ?

Update: 2018-11-13 11:08 GMT

ನಾವು ಉಸಿರಾಡುತ್ತಿರುವ ವಾಯು ಮಾಲಿನ್ಯಪೂರಿತವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ನಮ್ಮ ಸುತ್ತಲಿನ ವಾಯು ಗುಣಮಟ್ಟವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ ಮತ್ತು ಅದು ನಮ್ಮ ಆರೋಗ್ಯದ ಮೇಲೆ ನಾನಾ ದುಷ್ಪರಿಣಾಮಗಳನ್ನುಂಟು ಮಾಡುತ್ತಲೇ ಇದೆ. ವಾಯು ಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್,ಉಸಿರಾಟದ ತೊಂದರೆಯಂತಹ ಹಲವಾರು ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಸ್ತಮಾ ರೋಗಿಗಳ ಸಮಸ್ಯೆಗಳನ್ನು ಉಲ್ಬಣಿಸುತ್ತದೆ. ಧೂಳಿನಿಂದ ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಹಲವರು ಮಾಸ್ಕ್‌ಗಳನ್ನು ಧರಿಸಿರುವುದನ್ನೂ ನಾವು ನೋಡುತ್ತಿರುತ್ತೇವೆ.

ಆದರೆ ನಮ್ಮ ಮನೆ ಅಥವಾ ಕಚೇರಿಯಲ್ಲಿನ ವಾಯು ಗುಣಮಟ್ಟವೂ ಹೊರಗಿನ ವಾಯುವಿನಂತೆ ಕಳಪೆಯಾಗಿರುತ್ತದೆ. ಒಳಾಂಗಣ ವಾಯುಮಾಲಿನ್ಯವನ್ನು ನಿವಾರಿಸಲು ಏರ್ ಪ್ಯುರಿಫೈಯರ್‌ಗಳು ಅತ್ಯುತ್ತಮ ಮಾರ್ಗ ಎಂಬಂತೆ ಕಂಡು ಬರಬಹುದು. ಆದರೆ ಅವು ನಿಜಕ್ಕೂ ಪರಿಣಾಮಕಾರಿಯಾಗಿರುತ್ತವೆಯೇ? ಏರ್ ಪ್ಯುರಿಫೈಯರ್ ಖರೀದಿಸುವ ಮುನ್ನ ಇಂತಹ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಏರ್ ಪ್ಯುರಿಫೈಯರ್ ಕುರಿತು ಕೆಲವು ಸತ್ಯಗಳು ಇಲ್ಲಿವೆ.....

► ಅದು ಧೂಳನ್ನು ಸಂಪೂರ್ಣವಾಗಿ ತಡೆಯುವುದಿಲ್ಲ

ಏರ್ ಪ್ಯುರಿಫೈಯರ್ ಧೂಳನ್ನು ಸಂಪೂರ್ಣವಾಗಿ ತಡೆಯುತ್ತದೆ ಮತ್ತು ಮನೆಯು ಧೂಳುಮುಕ್ತವಾಗುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಅದಿದ್ದರೂ ಪೀಠೋಪಕರಣಗಳ ಮೇಲ್ಮೈನಂತಹ ವಿವಿಧ ಕಡೆಗಳಲ್ಲಿ,ಗಾಳಿಯಲ್ಲಿಯೂ ಧೂಳನ್ನು ಕಾಣಬಹುದು. ನೀವು ಧೂಳಿಗೆ ಅಲರ್ಜಿ ಹೊಂದಿದ್ದರೆ ಏರ್ ಪ್ಯುರಿಫೈಯರ್ ಪರಿಹಾರವಾಗುವುದಿಲ್ಲ,ನೀವು ಈಗಲೂ ಸ್ವಚ್ಛ ಮಾಡುವುದನ್ನು ಅವಲಂಬಿಸಬೇಕಾಗುತ್ತದೆ ಮತ್ತು ಎಲ್ಲ ಧೂಳನ್ನು ನಿವಾರಿಸಲು ಶಕ್ತಿಯುತ ವ್ಯಾಕ್ಯೂಮ್ ಕ್ಲೀನರ್ ಬಳಸಬೇಕಾಗುತ್ತದೆ.

► ಅದು ನಿಮಗೆ ಪೂರ್ಣ ಸುರಕ್ಷತೆ ನೀಡುವುದಿಲ್ಲ

ಮಾಲಿನ್ಯಕಾರಕಗಳು ಬಚ್ಚಿಟ್ಟುಕೊಳ್ಳಲು ಸೂಕ್ತವಾದ ಹಲವಾರು ಸ್ಥಳಗಳು ಮನೆಯಲ್ಲಿರುತ್ತವೆ. ದಿನವಿಡೀ ನಡೆಯುವ ಹಲವಾರು ಚಟುವಟಿಕೆಗಳೂ ಮನೆಯೊಳಗಿನ ವಾಯುಮಾಲಿನ್ಯವನ್ನು ಹೆಚ್ಚಿಸಲು ಪೂರಕವಾಗುತ್ತವೆ. ಕೆಲವೊಮ್ಮೆ ಏರ್ ಪ್ಯುರಿಫೈಯರ್‌ನಿಂದ ಅಶುದ್ಧ ವಾಯು ಹೊರಗೆ ನುಣುಚಬಹುದು ಮತ್ತು ಮನೆಯಲ್ಲಿಯೇ ಸುತ್ತಾಡುತ್ತಿರಬಹುದು. ಏರ್ ಪ್ಯುರಿಫೈಯರ್ ಬಳಕೆಯಿಂದ ನೀವು ಮನೆಯೊಳಗೆ ಉಸಿರಾಡುವ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದೇ ಹೊರತು ಗಾಳಿಯು ಸಂಪೂರ್ಣ ಆರೋಗ್ಯಕರವಾಗಿದೆ ಮತ್ತು ಮಾಲಿನ್ಯಮುಕ್ತವಾಗಿದೆ ಎಂಬ ಭರವಸೆಯನ್ನು ಅದು ನೀಡುವುದಿಲ್ಲ.

► ಹೆಪಾ ಫಿಲ್ಟರ್ ಹೆಚ್ಚು ಪರಿಣಾಮಕಾರಿಯಲ್ಲ

ಹೆಚ್ಚಿನ ಏರ್ ಪ್ಯುರಿಫೈಯರ್‌ಗಳು ಹೈಲಿ ಎಫಿಷಿಯಂಟ್ ಪಾರ್ಟಿಕ್ಯುಲೇಟ್ ಏರ್(ಎಚ್‌ಇಪಿಎ) ಅಥವಾ ಹೆಪಾ ಫಿಲ್ಟರ್‌ಗಳನ್ನೊಳಗೊಂಡಿರುತ್ತವೆ. ವಾಯುವನ್ನು ಶುದ್ಧಗೊಳಿಸುವಲ್ಲಿ ಈ ಫಿಲ್ಟರ್‌ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಎನ್ನಲಾಗಿದೆ. ಆದರೆ ಹೆಪಾ ಫಿಲ್ಟರ್ ಹೊಂದಿರುವ ಏರ್ ಪ್ಯುರಿಫೈಯರ್ ಎಲ್ಲ ಮಾಲಿನ್ಯಕಾರಕಗಳನ್ನು ನಿವಾರಿಸುವುದಿಲ್ಲ. ಹೀಗಾಗಿ ವಿವಿಧ ಫಿಲ್ಟರ್‌ಗಳಿಗಾಗಿ ಹೆಚ್ಚು ಹಣವನ್ನು ವ್ಯಯಿಸುವ ಮುನ್ನ ನೀವು ಎರಡು ಬಾರಿ ಯೋಚಿಸಬೇಕು ಮತ್ತು ಅವುಗಳ ಪರಿಣಾಮಕಾರಿತ್ವದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.

► ವೈರಸ್ ಮತ್ತು ಕ್ರಿಮಿಗಳನ್ನು ನಿವಾರಿಸುವುದಿಲ್ಲ

 ವಾಯು ಮಾಲಿನ್ಯವು ವಿವಿಧ ವೈರಸ್‌ಗಳು ಮತ್ತು ಕ್ರಿಮಿಗಳನ್ನು ಹೊತ್ತು ತರುತ್ತದೆ ಹಾಗೂ ಇವು ವಿವಿಧ ರೀತಿಗಳಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಜೊತೆಗೆ ತೀವ್ರ ಅಲರ್ಜಿಗಳಿಗೂ ಕಾರಣವಾಗುತ್ತವೆ. ಏರ್ ಪ್ಯುರಿಫೈಯರ್ ವಾಯುವನ್ನು ವೈರಸ್‌ಗಳು ಮತ್ತು ಕ್ರಿಮಿಗಳಿಂದ ಮುಕ್ತಗೊಳಿಸುವುದಿಲ್ಲ. ಅವು ಮಾಲಿನ್ಯಕಾರಕಗಳ ಮಟ್ಟವನ್ನು ತಗ್ಗಿಸಬಲ್ಲವು,ಆದರೂ ನಿಮ್ಮ ಮನೆಯಲ್ಲಿ ಉಳಿದುಕೊಳ್ಳುವ ವೈರಸ್‌ಗಳು ಮತ್ತು ಕ್ರಿಮಿಗಳು ಹಾನಿಯನ್ನುಂಟು ಮಾಡುತ್ತವೆ. ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸೋಂಕುಮುಕ್ತಗೊಳಿಸಲು ತೀವ್ರ ಸ್ವಚ್ಛತೆಯಂತಹ ಇತರ ವಿಧಾನಗಳಿಗೆ ನೀವು ಮೊರೆ ಹೋಗಬೇಕಾಗುತ್ತದೆ.

► ಏರ್ ಪ್ಯುರಿಫೈಯರ್‌ನ್ನು ಇಡುವ ಜಾಗ ಮುಖ್ಯ

ಏರ್ ಪ್ಯುರಿಫೈಯರ್‌ನ್ನು ತಮ್ಮ ಸಮೀಪವೇ ಇಟ್ಟುಕೊಳ್ಳುವುದರಿಂದ ಹೆಚ್ಚು ಶುದ್ಧ ಗಾಳಿ ದೊರೆಯುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಹೆಚ್ಚಿನ ಸಲ ಜನರು ತಾವು ಕುಳಿತಿರುವ ಸ್ಥಳದ ಬಳಿಯೇ ಏರ್ ಪ್ಯುರಿಫೈಯರ್‌ನ್ನು ಇಟ್ಟುಕೊಂಡಿರುತ್ತಾರೆ, ಆದರೆ ಇದು ಸೂಕ್ತವಲ್ಲ. ಇಡೀ ಕೋಣೆಯನ್ನು ವ್ಯಾಪಿಸಬಲ್ಲ ಸ್ಥಳದಲ್ಲಿ ಅದನ್ನು ಇರಿಸಬೇಕಾಗುತ್ತದೆ. ನೀವು ಕುಳಿತ ಸ್ಥಳದ ಸುತ್ತಲಷ್ಟೇ ವಾಯು ಶುದ್ಧಗೊಂಡರೆ ಸಾಲುವುದಿಲ್ಲ. ಇಡೀ ಕೋಣೆಯಲ್ಲಿನ ವಾಯುವು ಶುದ್ಧಗೊಳ್ಳುವಂತಹ ಸ್ಥಳದಲ್ಲಿ ಅದನ್ನಿಡಿ. ಏರ್ ಪ್ಯುರಿಫೈಯರ್‌ನ ವೇಗ ಕೂಡ ಇಲ್ಲಿ ಮುಖ್ಯವಾಗುತ್ತದೆ. ಮನೆಯ ಒಳಗಿನ ಮತ್ತು ಹೊರಗಿನ ಸ್ಥಿತಿಗಳಿಗೆ ತಕ್ಕಂತೆ ವೇಗವನ್ನು ಹೊಂದಿಸಿ ಮತ್ತು ಪ್ಯುರಿಫೈರ್‌ನ ಫಿಲ್ಟರ್‌ಗಳನ್ನು ಆಗಾಗ್ಗೆ ಪರಿಶೀಲಿಸುತ್ತಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News