ನೋಟು ನಿಷೇಧ,ರಫೇಲ್ ಕುರಿತು ಸಿಎಜಿ ವರದಿಗಳು ವಿಳಂಬವಾಗುತ್ತಿರುವುದೇಕೆ?: ಮಾಜಿ ಹಿರಿಯ ಅಧಿಕಾರಿಗಳ ಪ್ರಶ್ನೆ

Update: 2018-11-13 12:59 GMT

ಹೊಸದಿಲ್ಲಿ,ನ.13: ನೋಟು ನಿಷೇಧ ಮತ್ತು ರಫೇಲ್ ಒಪ್ಪಂದ ಕುರಿತು ಆಡಿಟ್ ವರದಿಗಳನ್ನು ಸಲ್ಲಿಸುವಲ್ಲಿ ಸಿಎಜಿಯಿಂದ ಅನುಚಿತ ಮತ್ತು ಅನಗತ್ಯ ವಿಳಂಬವಾಗುತ್ತಿದೆ ಎಂದು 60 ಮಾಜಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಗುಂಪೊಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಬೆಟ್ಟುಮಾಡಿದೆ.

ಹಾಲಿ ಸರಕಾರಕ್ಕೆ ಯಾವುದೇ ಮುಜುಗರವಾಗದಂತಿರಲು ಸಿಎಜಿ ಮುಂದಿನ ವರ್ಷದ ಮೇ.19ರ ಚುನಾವಣೆಗಳವರೆಗೆ ತನ್ನ ಆಡಿಟ್ ವರದಿಗಳನ್ನು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದೆ ಎಂಬ ಭಾವನೆ ಬಲಗೊಳ್ಳುತ್ತಿದೆ ಎಂದು ಅದು ಹೇಳಿದೆ.

ಹಿಂದಿನ ಸರಕಾರದ ಕ್ರಮಗಳ ಬಗ್ಗೆ ಸಾರ್ವಜನಿಕ ದೃಷ್ಟಿಕೋನದ ಮೇಲೆ ಪರಿಣಾಮವನ್ನು ಬೀರಿದ್ದ 2ಜಿ,ಕಲ್ಲಿದ್ದಲು,ಆದರ್ಶ ಮತ್ತು ಕಾಮನ್‌ವೆಲ್ತ್ ಹಗರಣಗಳ ಕುರಿತು ಸಿಎಜಿ ವರದಿಗಳು ಸಮಾಜದ ವಿವಿಧ ವರ್ಗಗಳ ಪ್ರಶಂಸೆಗಳಿಗೆ ಪಾತ್ರವಾಗಿದ್ದವು ಎಂದು ಹೇಳಿರುವ ಪತ್ರವು,ನೋಟು ನಿಷೇಧ ಮತ್ತು ರಫೇಲ್ ಒಪ್ಪಂದಗಳ ಆಡಿಟ್ ವರದಿಗಳನ್ನು ಸಕಾಲದಲ್ಲಿ ಸಲ್ಲಿಸುವಲ್ಲಿ ಸಿಎಜಿ ವೈಫಲ್ಯವು ಪಕ್ಷಪಾತದ ಕ್ರಮವೆಂಬಂತೆ ಕಂಡು ಬರಬಹುದು ಮತ್ತು ಈ ಪ್ರಮುಖ ಸಂಸ್ಥೆಯ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಸೃಷ್ಟಿಸಬಹುದು. ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪಗಳು ಮತ್ತು ಕೆಸರೆರಚಾಟದಿಂದಾಗಿ ನಿಜವೇನು ಎನ್ನುವುದು ಪ್ರಜೆಗಳಿಗೆ ತಿಳಿಯುತ್ತಿಲ್ಲ. ಮತದಾನದ ಸಂದರ್ಭದಲ್ಲಿ ತಾವು ಸರಿಯಾದ ಆಯ್ಕೆಯನ್ನು ಮಾಡಲು ಸಿಎಜಿಯಿಂದ ಸಕಾಲದಲ್ಲಿ ಆಡಿಟ್ ವರದಿಗಳ ಸಲ್ಲಿಕೆಗೆ ಒತ್ತಾಯಿಸುವ ಹಕ್ಕನ್ನು ಪ್ರಜೆಗಳು ಹೊಂದಿದ್ದಾರೆ ಎಂದು ಒತ್ತಿಹೇಳಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗಳು ನಡೆಯುವಂತಾಗಲು ಸಕಾಲದಲ್ಲಿ ವರದಿಗಳನ್ನು ಪೂರ್ಣಗೊಳಿಸುವಂತೆ ಈ ನಿವೃತ್ತ ಅಧಿಕಾರಿಗಳು ಸಿಎಜಿಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News