ಮದ್ಯಪಾನ ಸೇವಿಸಿ ವಿಮಾನ ಹಾರಾಟ ಮಾಡಿದ ಏರ್ ಇಂಡಿಯಾ ಪೈಲಟ್ ವಜಾ

Update: 2018-11-13 16:58 GMT

ಹೊಸದಿಲ್ಲಿ,ನ.13: ಮದ್ಯಪಾನ ಮಾಡಿ ವಿಮಾನ ಹಾರಾಟ ಮಾಡಿ ಸಿಕ್ಕಿಬಿದ್ದ ಏರ್ ಇಂಡಿಯಾದ ಪೈಲಟ್ ಅರವಿಂದ್ ಕತ್ಪಲಿಯರನ್ನು ವೈಮಾನಿಕ ಸಂಸ್ಥೆ ಮಂಗಳವಾರ ಹುದ್ದೆಯಿಂದ ವಜಾಗೊಳಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರದಂದು ಹೊಸದಿಲ್ಲಿಯಿಂದ ಲಂಡನ್‌ಗೆ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟ ನಡೆಸುವುದಕ್ಕೂ ಮೊದಲು ಕತ್ಪಲಿಯ ಆಲ್ಕೊಹಾಲ್ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಈ ಕಾರಣದಿಂದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಸಿಜಿಎ) ಸೋಮವಾರಂದು ಕತ್ಪಲಿಯ ಅವರ ಪರವಾನಿಗೆಯನ್ನು ರದ್ದು ಮಾಡಿತ್ತು. ಇದಕ್ಕೂ ಮೊದಲು 2017ರಲ್ಲಿ ವಿಮಾನ ಹಾರಟಕ್ಕೂ ಮುನ್ನ ಉಸಿರಾಟ ಪರೀಕ್ಷೆಯನ್ನು ತಪ್ಪಿಸಿದ್ದ ಕಾರಣಕ್ಕಾಗಿ ಕತ್ಪಲಿಯ ಅವರ ಪರವಾನಿಗೆಯನ್ನು ಮೂರು ತಿಂಗಳ ಅವಧಿಗೆ ಅಮಾನತಿನಲ್ಲಿಡಲಾಗಿತ್ತು. ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕ, ಕಾರ್ಯಾಚರಣೆ ವಿಭಾಗ ಹುದ್ದೆಯಿಂದ ವಜಾಗೊಳಿಸಲಾಗಿದ್ದರೂ ನಂತರ ಅದೇ ಹುದ್ದೆಯಲ್ಲಿ ಮರು ನೇಮಿಸಲಾಗಿತ್ತು.

ಕತ್ಪಲಿಯರನ್ನು ಪುನರಾವರ್ತಿತ ಅಪರಾಧಿ ಎಂದು ವ್ಯಾಖ್ಯಾನಿಸಿರುವ ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘ (ಐಸಿಪಿಎ) ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News