ವಿದೇಶಿ ಭಾಗಿದಾರ ಅರ್ಧದಲ್ಲೇ ಬಿಟ್ಟು ಹೋದರೆ ಏನಾಗಬಹುದು: ರಫೇಲ್ ವಿಚಾರದಲ್ಲಿ ಸುಪ್ರೀಂ ಪ್ರಶ್ನೆ

Update: 2018-11-14 17:27 GMT

ಹೊಸದಿಲ್ಲಿ,ನ.14: ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ವಿದೇಶಿ ಭಾಗಿದಾರನನ್ನು ಆಯ್ಕೆ ಮಾಡುವಲ್ಲಿ ತನ್ನದೇನೂ ಪಾತ್ರವಿರಲಿಲ್ಲ ಎಂಬ ಸರಕಾರದ ನಿಲುವನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಇದೇ ವೇಳೆ, ರಫೇಲ್ ತಯಾರಕ ಕಂಪೆನಿ ಡಸಾಲ್ಟ್ ತನ್ನ ವಿದೇಶಿ ಭಾಗಿದಾರರ ವಿವರವನ್ನು ಇನ್ನೂ ನೀಡಿಲ್ಲ ಎಂದು ಕೇಂದ್ರ ಶ್ರೇಷ್ಠ ನ್ಯಾಯಾಲಯಕ್ಕೆ ತಿಳಿಸಿದೆ.

ಒಪ್ಪಂದದ ಮುಖ್ಯ ಗುತ್ತಿಗೆದಾರರು ತಮ್ಮ ವಿದೇಶಿ ಜೊತೆಗಾರರ ಮಾಹಿತಿಯನ್ನು ನಮಗೆ ನೀಡುತ್ತಾರೆ. ಈವರೆಗೆ ಅವರು ಅಂಥ ಯಾವುದೇ ಮಾಹಿತಿಯನ್ನು ನಮಗೆ ನೀಡಿಲ್ಲ ಎಂದು ಹೆಚ್ಚುವರಿ ರಕ್ಷಣಾ ಕಾರ್ಯದರ್ಶಿ ಅಪೂರ್ವ ಚಂದ್ರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿದೇಶಿ ಜೊತೆಗಾರರಿಗೆ ನೀಡಲಾಗಿದ್ದ ಸೂಚನೆಗಳನ್ನು 2015ರಲ್ಲಿ ಬದಲಾಯಿಸಿದ್ದಾದರೂ ಯಾಕೆ ಎಂದು ನ್ಯಾಯಾಧೀಶರು ರಕ್ಷಣಾ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ, 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಮಾಡಲಾಗಿದ್ದ ಒಪ್ಪಂದವನ್ನು ಎನ್‌ಡಿಎ ಸರಕಾರ ರದ್ದುಗೊಳಿಸಿ ಅನಿಲ್ ಅಂಬಾನಿಯ ನಷ್ಟದಲ್ಲಿರುವ ರಕ್ಷಣಾ ಕಂಪೆನಿಗೆ ನೆರವಾಗುವಂತೆ 36 ಯುದ್ಧ ವಿಮಾನಗಳನ್ನು ಖರೀದಿಸುವ ಹೊಸ ಅಷ್ಟು ಲಾಭದಾಯಕವಲ್ಲದ ಒಪ್ಪಂದವನ್ನು ಮಾಡಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಾಕಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವ ವೇಳೆ ನ್ಯಾಯಾಲಯ ಈ ಸಂಶಯಗಳನ್ನು ವ್ಯಕ್ತಪಡಿಸಿದೆ.

ಒಂದು ವೇಳೆ ವಿದೇಶಿ ಭಾಗಿದಾರ ಅರ್ಧದಲ್ಲೇ ಬಿಟ್ಟು ಹೋದರೆ ಏನಾಗಬಹುದು?, ಆಗ ದೇಶದ ಹಿತಾಸಕ್ತಿಯ ಏನಾಗಬಹುದು?, ಒಂದು ವೇಳೆ ವಿದೇಶಿ ಭಾಗಿದಾರ ಯಾವುದೇ ಉತ್ಪಾದನೆ ಮಾಡದಿದ್ದರೆ? ಎಂದು ನ್ಯಾಯಾಧೀಶ ಕೆ.ಎಂ.ಜೋಸೆಫ್ ಪ್ರಶ್ನಿಸಿದ್ದಾರೆ. ಸರಕಾರವು ಮುಖ್ಯ ಒಪ್ಪಂದವನ್ನು ವಿದೇಶಿ ಒಪ್ಪಂದದಿಂದ ಪ್ರತ್ಯೇಕಿಸುವಂತಿಲ್ಲ. ವಿದೇಶಿ ಒಪ್ಪಂದವನ್ನು ತಡವಾಗಿ ಮಾಡಿದರೆ ವಿದೇಶಿ ಜೊತೆಗಾರ ಇದೇ ಕಾರಣಕ್ಕೆ ಉತ್ಪಾದನೆಯನ್ನೂ ವಿಳಂಬವಾಗಿ ಆರಂಭಿಸಬಹುದು. ಇದು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಉತ್ತಮವಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News