ನವೆಂಬರ್ 17ರಂದು ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶ

Update: 2018-11-14 17:47 GMT

ಹೊಸದಿಲ್ಲಿ, ನ. 14: ಎರಡು ತಿಂಗಳು ಕಾಲದ ವಾರ್ಷಿಕ ಯಾತ್ರಾ ಅವಧಿಯ ಸಂದರ್ಭ ನವೆಂಬರ್ 17ರಂದು ಕೇರಳದ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದೇನೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿ ತೃಪ್ತಿ ದೇಸಾಯಿ ಬುಧವಾರ ಘೋಷಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದ ಸೆಪ್ಟಂಬರ್ 28ರ ತೀರ್ಪನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಹಾಗೂ ಮರು ಪರಿಶೀಲನೆಯ ಮನವಿಗಳ ಗುಚ್ಚವನ್ನು ಜನವರಿ 22ರಂದು ವಿಚಾರಣೆ ನಡೆಸುವ ವರೆಗೆ ದೂರುದಾರರು ಕಾಯುವಂತೆ ಸುಪ್ರೀಂ ಕೋರ್ಟ್ ಹೇಳಿದ ಬಳಿಕ ತೃಪ್ತಿ ದೇಸಾಯಿ ಅವರ ಈ ಹೇಳಿಕೆ ಹೊರಬಿದ್ದಿದೆ. ಭೂಮಾತಾ ಬ್ರಿಗೇಡ್‌ನ ಸ್ಥಾಪಕರಾಗಿರುವ ತೃಪ್ತಿ ದೇಸಾಯಿ ನವೆಂಬರ್ 17ರಂದು ತನಗೆ ಭದ್ರತೆ ನೀಡುವಂತೆ ಕೋರಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.

“ಸುಪ್ರೀಂ ಕೋರ್ಟ್ ನೀಡಿದ ಅನುಮತಿಯಂತೆ ನಾನು ಶಬರಿಮಲೆಗೆ ಬರುತ್ತೇನೆ ಹಾಗೂ ದೇವಾಲಯ ಪ್ರವೇಶಿಸುತ್ತೇನೆ” ಎಂದು ದೇಸಾಯಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ನಾಯಕಿಯಾಗಿರುವ, ಪುಣೆ ಮೂಲದ ದೇಸಾಯಿ ಮಹಾರಾಷ್ಟ್ರದ ಅಹ್ಮದಾನಗರ್ ಜಿಲ್ಲೆಯ ಶನಿ ಶಿಂಗನಾಪುರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಹೋರಾಟ ನಡೆಸಿದ್ದರು. ದೇಶದಲ್ಲಿ ಮಹಿಳೆಯರ ಹಕ್ಕು ಚಳವಳಿಯಲ್ಲಿ ಇದು ಚಾರಿತ್ರಿಕ ಚಳವಳಿ. ಗರ್ಭಗುಡಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿದ ದೇಶದ ಇತರ ಪ್ರಖ್ಯಾತ ದೇವಾಲಯದ ವಿರುದ್ಧ ಅಭಿಯಾನ ನಡೆಯಲು ಇದು ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News