ನಿತೀಶ್‌ರಿಂದ ಸಿಸಿಟಿವಿ ಮೂಲಕ ಗೂಢಚಾರಿಕೆ: ತೇಜಸ್ವಿ ಯಾದವ್ ಆರೋಪ

Update: 2018-11-15 15:14 GMT

ಹೊಸದಿಲ್ಲಿ, ನ.15: ತನ್ನ ಮನೆಯ ಬಳಿ ಸಿಸಿಟಿವಿ ಕ್ಯಾಮರಾ ಇರಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೂಢಚಾರಿಕೆ ನಡೆಸುತ್ತಿದ್ದಾರೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ತೇಜಸ್ವಿ, ಮುಖ್ಯಮಂತ್ರಿಯವರ ಮನೆ ಹಾಗೂ ತನ್ನ ಮನೆಯ ನಡುವಿನ ಗೋಡೆಯ ಬಳಿ ಸಿಸಿಟಿವಿ ಕ್ಯಾಮರಾ ಸ್ಥಾಪಿಸಲಾಗಿದೆ. ಇದು ನಿತೀಶ್ ಅವರ ಸಂಶಯಗ್ರಸ್ತತೆಯ ದ್ಯೋತಕವಾಗಿದೆ. ಅವರ ಮನೆಯೆದುರು ಭದ್ರತಾ ತಪಾಸಣೆ ಕೇಂದ್ರ ಇರುವಾಗ, ತಮ್ಮ ಮನೆಯ ಬಳಿ ಮಾತ್ರ ಸಿಸಿಟಿವಿ ಕ್ಯಾಮರಾ ಅಳವಡಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳ ಮನೆಯ ಮೂರು ಸುತ್ತ ಮುಖ್ಯರಸ್ತೆಗಳಿದ್ದು ಸಾಕಷ್ಟು ಭದ್ರತಾ ವ್ಯವಸ್ಥೆ ಇದೆ. ಮತ್ತೊಂದು ಬದಿಯಲ್ಲಿ ವಿರೋಧ ಪಕ್ಷದ ನಾಯಕನ ಮನೆಯಿದೆ. ಹಾಗಿದ್ದರೂ ಒಂದು ಬದಿಯ ಗೋಡೆಯ ಬಳಿ ಸಿಸಿಟಿವಿ ಕ್ಯಾಮರಾ ಇಡಲಾಗಿದೆ. ಇಂಥಹ ಚಿಲ್ಲರೆ ಕೆಲಸಗಳಿಂದ ಏನೂ ಪ್ರಯೋಜನವಾಗದು ಎಂದು ಮುಖ್ಯಮಂತ್ರಿ ಅರಿತುಕೊಳ್ಳಬೇಕು. ಪಾಟ್ನಾ ಪ್ರದೇಶದಲ್ಲಿ ಪ್ರತೀ ಕ್ಷಣ ಭೀಕರ ಅಪರಾಧ ಘಟಿಸುತ್ತಿರುತ್ತದೆ. ಈ ಬಗ್ಗೆ ಗಮನ ನೀಡುವ ಬದಲು ವಿಪಕ್ಷ ಮುಖಂಡರ ವಿರುದ್ಧ ಗೂಢಚಾರಿಕೆ ನಡೆಸುತ್ತಿದ್ದಾರೆ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News