ಮಿಝೊರಾಂ: ಮುಖ್ಯ ಚುನಾವಣಾಧಿಕಾರಿಯಾಗಿ ಆಶಿಶ್ ಕುಂದ್ರಾ ನೇಮಕ

Update: 2018-11-15 15:20 GMT

   ಹೊಸದಿಲ್ಲಿ, ನ.15: ಚುನಾವಣೆಯ ಹೊಸ್ತಿಲಲ್ಲಿರುವ ಮಿಝೊರಾಂನಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಎಸ್.ಬಿ.ಶಶಾಂಕ್‌ರನ್ನು ಬದಲಿಸಬೇಕೆಂಬ ಆಗ್ರಹಕ್ಕೆ ಕಡೆಗೂ ಮಣಿದಿರುವ ಚುನಾವಣಾ ಆಯೋಗ, ಶಶಾಂಕ್ ಸ್ಥಾನದಲ್ಲಿ ಐಎಎಸ್ ಅಧಿಕಾರಿ ಆಶಿಶ್ ಕುಂದ್ರಾರನ್ನು ನೇಮಿಸಿ ಆದೇಶ ಹೊರಡಿಸಿದೆ.

ತ್ರಿಪುರಾದಲ್ಲಿ ಪರಿಹಾರ ಶಿಬಿರದಲ್ಲಿ ನೆಲೆಸಿರುವ ಮಿರೆರಾಂನ ಬ್ರೂ ಬುಡಕಟ್ಟಿನ ನಿರಾಶ್ರಿತರಿಗೆ, ಈ ಹಿಂದಿನ ಕ್ರಮದಂತೆ ಪರಿಹಾರ ಶಿಬಿರದಲ್ಲೇ ಮತದಾನದ ಹಕ್ಕು ನೀಡಬೇಕೆಂಬ ಶಶಾಂಕ್ ನಿಲುವಿಗೆ ರಾಜ್ಯ ಸರಕಾರವೂ ಸೇರಿದಂತೆ ಬಹುತೇಕ ಮಿರೆ ಜನತೆ ವಿರೋಧ ಸೂಚಿಸಿದ್ದರು. ಸುಮಾರು 32 ಸಾವಿರದಷ್ಟಿರುವ ಬ್ರೂ ನಿರಾಶ್ರಿತರು ಮಿಝೊರಾಂಗೆ ಬಂದು ಮತದಾನ ನಡೆಸಬೇಕೆಂಬುದು ಇವರ ಆಗ್ರಹವಾಗಿದೆ. ಮಂಗಳವಾರ ಶಶಾಂಕ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದ ಮಿಝೊರಾಂ ಎನ್‌ಜಿಒ ಸಮನ್ವಯ ಸಮಿತಿ (ಮಿರೊ ನಾಗರಿಕ ಸಂಘಟನೆಯ ಒಕ್ಕೂಟ) ಸದಸ್ಯರು ಶಶಾಂಕ್ ಪದಚ್ಯುತಿಗೆ ಆಗ್ರಹಿಸಿದ್ದರು.

ಬಳಿಕ ಜಾರ್ಖಂಡ್ ಮುಖ್ಯ ಚುನಾವಣಾಧಿಕಾರಿ ಲಾಲ್ಬಿಯಥಂಗ ಖಿಯಾಂಗೆ, ಚುನಾವಣಾ ಆಯೋಗದ ನಿರ್ದೇಶಕ ನಿಖಿಲ್ ಕುಮಾರ್ ಹಾಗೂ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್.ಬಿ.ಜೋಷಿ ಮಿಝೊರಾಂ ಎನ್‌ಜಿಒ ಸಮನ್ವಯ ಸಮಿತಿ ಸದಸ್ಯರ ಜೊತೆ ಮಾತುಕತೆ ನಡೆಸಿದ್ದರು.

ಇದೀಗ ತಕ್ಷಣದಿಂದ ಜಾರಿಗೆ ಬರುವಂತೆ ಮಿಝೊರಾಂನ ಮುಖ್ಯ ಚುನಾವಣಾಧಿಕಾರಿಯಾಗಿ ಆಶಿಶ್ ಕುಂದ್ರಾರನ್ನು ನೇಮಿಸಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಿರೆರಾಂನಲ್ಲಿ ನವೆಂಬರ್ 28ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News