ಆಕಾಶವಾಣಿಗೂ ತಟ್ಟಿದ “ಮೀಟೂ” ಬಿಸಿ

Update: 2018-11-15 16:08 GMT

ಹೊಸದಿಲ್ಲಿ, ನ.15: ಸರಕಾರಿ ಅಧೀನದ ಆಕಾಶವಾಣಿಯಲ್ಲಿ ತಾತ್ಕಾಲಿಕ ಉದ್ಘೋಷಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿಯ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಬಗ್ಗೆ ತಾತ್ಕಾಲಿಕ ಸಿಬ್ಬಂದಿ ಸಲ್ಲಿಸಿರುವ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ಯೋಗಸ್ಥಳದ ಕಾಯ್ದೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ರಾಠೋರ್‌ಗೆ ಬರೆದಿರುವ ಪತ್ರದಲ್ಲಿ ಮೇನಕಾ ಹೇಳಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಆಕಾಶವಾಣಿಯಲ್ಲಿ ತಾತ್ಕಾಲಿಕ ಉದ್ಘೋಷಕರಾಗಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿ ದೂರಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿರುವ ವರದಿಯ ಪ್ರತಿಯನ್ನು ಪತ್ರದೊಂದಿಗೆ ಲಗತ್ತಿಸಿದ್ದೇನೆ. ಆಕಾಶವಾಣಿಯ ವಿವಿಧ ಸ್ಟೇಷನ್‌ಗಳಲ್ಲಿ ಈ ಸಮಸ್ಯೆ ಇದೆ ಎಂದು ಸುದ್ದಿಯಲ್ಲಿ ತಿಳಿಸಲಾಗಿದೆ. ಇದೊಂದು ಗಂಭೀರ ವರದಿಯಾಗಿರುವ ಕಾರಣ ಈ ಬಗ್ಗೆ ನಿಮಗೆ ಪತ್ರ ಬರೆಯುವುದು ಅನಿವಾರ್ಯವಾಗಿದೆ ಎಂದು ಮೇನಕಾ ತಿಳಿಸಿದ್ದಾರೆ.

ತಾತ್ಕಾಲಿಕ ಮಹಿಳಾ ಉದ್ಯೋಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದ ತಕ್ಷಣ ಅವರನ್ನು ಕೆಲಸದಿಂದ ಕಿತ್ತುಹಾಕುವ ಪ್ರವೃತ್ತಿ ಒಳ್ಳೆಯದಲ್ಲ. ಕಾಯಂ ಉದ್ಯೋಗಿ, ತಾತ್ಕಾಲಿಕ ಉದ್ಯೋಗಿ ಎಂಬ ತಾರತಮ್ಯವಿಲ್ಲದೆ ಉದ್ಯೋಗಸ್ಥಳದ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾಗಿದೆ . ಕೆಲವು ಮಹಿಳೆಯರು ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News