ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದ: ಸರ್ವಪಕ್ಷಗಳ ಸಭೆ ವಿಫಲ

Update: 2018-11-15 16:15 GMT

ಹೊಸದಿಲ್ಲಿ, ನ. 15: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಋತುಚಕ್ರ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅನುಷ್ಠಾನಗೊಳಿಸುವ ತನ್ನ ನಿಲುವಿಗೆ ಕೇರಳ ಸರಕಾರ ಬದ್ಧವಾಗಿದ್ದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಹೊರನಡೆದಿದ್ದು, ಇದರ ಪರಿಣಾಮ ಶಬರಿಮಲೆ ಕುರಿತು ಚರ್ಚಿಸಲು ಗುರುವಾರ ನಡೆದ ಸರ್ವ ಪಕ್ಷಗಳ ಸಭೆ ವಿಫಲವಾಯಿತು.

ಪುನರ್ ಪರಿಶೀಲನಾ ಅರ್ಜಿ ಗುಚ್ಛಗಳ ವಿಚಾರಣೆ ನಡೆಯಲಿರುವ ಜನವರಿ 22ರ ವರೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನವನ್ನು ಬದಿಗಿರಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು. ಈ ಆಗ್ರಹವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದರು. ಸುಪ್ರೀಂ ಕೋರ್ಟ್ ತನ್ನ ಸೆಪ್ಟಂಬರ್ 28ರ ತೀರ್ಪಿಗೆ ತಡೆ ನೀಡಿಲ್ಲ. ಆದುದರಿಂದ ಮುಂಬರುವ ಯಾತ್ರಾ ಅವಧಿಯಲ್ಲಿ 10ರಿಂದ 15 ವರ್ಷ ವಯೋಮಿತಿ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡದ ಹೊರತು ಬೇರೆ ಆಯ್ಕೆ ಇಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಆದುದರಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ಸಭೆ ತ್ಯಜಿಸಿ ಹೊರನಡೆಯಿತು. ಸುಪ್ರೀಂ ಕೋರ್ಟ್ ಕಳೆದ ತಿಂಗಳು ಆದೇಶ ನೀಡಿದ ಬಳಿಕ ಎರಡು ಬಾರಿ ಬಾಗಿಲು ತೆರೆದ ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷಗಳ ವಯೋಮಾನದ ಮಹಿಳೆಯರು ಪ್ರವೇಶಿಸುವುದರ ವಿರುದ್ಧ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರಕಾರ ಯಾವುದೇ ಪೂರ್ವಾಗ್ರಹವಿಲ್ಲದೆ ಸಭೆ ಆಯೋಜಿಸಿತ್ತು. ‘‘ಸರಕಾರ ಹಠ ಸಾಧಿಸುತ್ತಿಲ್ಲ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಗೊಳಿಸದೆ ಬೇರೆ ಆಯ್ಕೆ ಇಲ್ಲ. ಸರಕಾರ ತೀರ್ಪು ಪಾಲಿಸಬೇಕು’’ ಎಂದು ಅವರು ಹೇಳಿದ್ದಾರೆ. ಸರಕಾರ ಭಕ್ತರೊಂದಿಗೆ ಇದೆ. ಯಾವುದೇ ರೀತಿಯ ಕಳವಳಪಡುವ ಅಗತ್ಯತೆ ಇಲ್ಲ. ಸರಕಾರ ಎಲ್ಲ ಭಕ್ತರಿಗೆ ಭದ್ರತೆ ನೀಡಲಿದೆ. ಸರಕಾರ ತೀರ್ಪನ್ನು ಅನುಸರಿಸಬೇಕಷ್ಟೆ. ಎಲ್ಲ ಭಕ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಹೇಳಿದರು. ಸಭೆ ತ್ಯಜಿಸುವುದಾಗಿ ಘೋಷಿಸಿದ್ದ ಕೇರಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ, ಸುಪ್ರೀ ಕೋರ್ಟ್‌ನ ತೀರ್ಪನ್ನು ಅನುಷ್ಠಾನಗೊಳಿಸುವ ತನ್ನ ನಿಲುವನ್ನು ರಾಜ್ಯ ಸರಕಾರ ಬದಲಾಯಿಸುತ್ತಿಲ್ಲ ಹಾಗೂ ಅದು ಯಾವುದೇ ರಾಜಿಗೆ ಸಿದ್ದವಿಲ್ಲ ಎಂದರು. ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ವರಿಷ್ಠ ಪಿ.ಎಸ್. ಶ್ರೀಧರನ್ ಪಿಳ್ಳೈ, ‘ಸಭೆಯಿಂದ ಸಮಯ ವ್ಯರ್ಥ’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News