ಬಡತನ ನಿವಾರಣೆಗೆ ಹೆಚ್ಚಿನ ಪ್ರಗತಿ ಅಗತ್ಯ: ಕೇಂದ್ರ ಸಚಿವ ಜೇಟ್ಲಿ

Update: 2018-11-15 17:36 GMT

ಹೊಸದಿಲ್ಲಿ,ನ.15: ಬಡತನವನ್ನು ನಿವಾರಿಸಲು ಮತ್ತು ಅಭಿವೃದ್ಧಿಯ ಲಾಭಗಳು ಬಡವರಿಗೆ ತಲುಪುವಂತಾಗಲು ಹೆಚ್ಚಿನ ಪ್ರಗತಿ ದರವು ಅಗತ್ಯವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಇಲ್ಲಿ ಹೇಳಿದರು.

 ಸೇವಿಂಗ್ಸ್ ಮತ್ತು ರಿಟೇಲ್ ಬ್ಯಾಂಕುಗಳ 25ನೇ ವಿಶ್ವ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ವಿಶ್ವಾದ್ಯಂತ ನಮ್ಮಂತಹ ಆರ್ಥಿಕತೆಗಳಿಗೆ ಹೆಚ್ಚಿನ ಪ್ರಗತಿದರ ಅಗತ್ಯವಾಗಿದೆ. ಗರಿಷ್ಠ ಸಂಖ್ಯೆಯ ಜನರನ್ನು ಬಡತನದಿಂದ ಹೊರಗೆ ತರಲು ಮತ್ತು ಜೀವನ ಮಟ್ಟವನ್ನು ಉತ್ತಮಗೊಳಿಸಲು ಪ್ರಗತಿಯನ್ನು ಒಂದು ವ್ಯವಸ್ಥೆಯನ್ನಾಗಿ ಬಳಸಿಕೊಳ್ಳಲು ನಾವು ಬಯಸುತ್ತೇವೆ. ಆದರೆ ಇದೇ ವೇಳೆ ಅಭಿವೃದ್ಧಿ ಮತ್ತು ಬೆಳವಣಿಗೆಯ ಫಲಗಳು ಕೆಲವೇ ಜನರನ್ನು ತಲುಪುವ ಮತ್ತು ಇತರರು ವ್ಯವಸ್ಥೆಯಿಂದ ಹೊರಗುಳಿಯುವ ಅಪಾಯಗಳೂ ಇವೆ ಎನ್ನುವುದು ನಮಗೆ ಗೊತ್ತಿದೆ. ಹೀಗಾಗಿ ಪ್ರಗತಿಯ ಫಲಗಳು ಎಲ್ಲರಿಗೂ ಖಂಡಿತ ದೊರೆಯಲಿವೆ,ಆದರೆ ಅದು ನಿಧಾನ ಪ್ರಕ್ರಿಯೆಯಾಗಲಿದೆ ಮತ್ತು ಮಹಾತ್ವಾಕಾಂಕ್ಷಿ ಸಮಾಜವು ಅನಿರ್ದಿಷ್ಟಾವಧಿಗೆ ಕಾಯಲು ಒಪ್ಪುವುದಿಲ್ಲ ಎಂದು ಹೇಳಿದರು.

2014ರಿಂದ ನರೇಂದ್ರ ಮೋದಿ ಸರಕಾರದ ಆರ್ಥಿಕ ಸೇರ್ಪಡೆ ಅಭಿಯಾನದ ಕುರಿತು ಮಾತನಾಡಿದ ಅವರು,ಬ್ಯಾಂಕ್ ಸೌಲಭ್ಯವಂಚಿತರಿಗೆ ಬ್ಯಾಂಕ್ ಸೇವೆ, ಭದ್ರತೆ ಇಲ್ಲದವರಿಗೆ ಭದ್ರತೆ, ಹಣವಿಲ್ಲದಿದ್ದವರಿಗೆ ಹಣ ಮತ್ತು ಸೇವೆಯಿಂದ ವಂಚಿತವಾಗಿದ್ದ ಪ್ರದೇಶಗಳಿಗೆ ಸೇವೆಗಳನ್ನು ಒದಗಿಸುವುದು ಅದರ ಉದ್ದೇಶವಾಗಿದೆ ಎಂದರು.

ಬ್ಯಾಂಕುಗಳು,ವಿಶೇಷವಾಗಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ಕೆಲವೇ ತಿಂಗಳುಗಳಲ್ಲಿ 330 ಮಿ. ಖಾತೆಗಳನ್ನು ತೆರೆದಿವೆ. ಆರಂಭದಲ್ಲಿ ಇವು ಶೂನ್ಯಶಿಲ್ಕಿನ ಖಾತೆಗಳಾಗಿದ್ದರೂ,ಜನರು ಕ್ರಮೇಣ ಹಣವನ್ನು ಜಮಾ ಮಾಡಲು ಆರಂಭಿಸಿದ್ದಾರೆ ಎಂದು ಹೇಳಿದ ಜೇಟ್ಲಿ, ಸರಕಾರವು ಅಗ್ಗದ ಪ್ರೀಮಿಯಮ್‌ಗಳಲ್ಲಿ ಜೀವವಿಮೆ ಮತ್ತು ಅಪಘಾತ ವಿಮೆ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು. ಸರಕಾರವು ಮುದ್ರಾ ಯೋಜನೆ ಮತ್ತು ಜಿಎಸ್‌ಟಿ ಯನ್ನು ಜಾರಿಗೊಳಿಸಿರುವುದನ್ನೂ ಅವರು ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News