ಭ್ರಷ್ಟಾಚಾರ ಆರೋಪ: ಜಿಲ್ಲಾ ನ್ಯಾಯಾಧೀಶರನ್ನೇ ಬಂಧಿಸಿದ ಪೊಲೀಸರು

Update: 2018-11-15 17:52 GMT

ಹೈದರಾಬಾದ್,ನ.15: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಕಾರಣಕ್ಕೆ ತೆಲಂಗಾಣದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ ಮಾಧ್ಯಮ ವರದಿಗಳು ತಿಳಿಸಿವೆ. ತೆಲಂಗಾಣದ ರಂಗರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ 14ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಆಗಿರುವ ವಿ.ವರ ಪ್ರಸಾದ್ ಅವರಿಗೆ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಚಂಚಲಗೂಡು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳವು ಮಂಗಳವಾರದಂದು ವರ ಪ್ರಸಾದ್ ವಿರುದ್ಧ ಆಸ್ತಿ ಅವ್ಯವಹಾರ ಪ್ರಕರಣ ದಾಖಲಿಸಿದ್ದು, ಬುಧವಾರದಂದು ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಈವರೆಗೆ ವರಪ್ರಸಾದ್ ಮನೆಯಿಂದ 1.5 ಕೋಟಿ ರೂ. ಮೊತ್ತದ ಸಂಪತ್ತನ್ನು ಪತ್ತೆಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ.

ನ್ಯಾಯಾಧೀಶರ ವಿರುದ್ಧ ಹೈದರಾಬಾದ್ ಉಚ್ಚ ನ್ಯಾಯಾಲಯಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಾಥಮಿಕ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ವರ ಪ್ರಸಾದ್ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿರುವ ತೆಲಂಗಾಣದ ಐದನೇ ನ್ಯಾಯಾಧೀಶರಾಗಿದ್ದಾರೆ. ಈ ಹಿಂದೆ ಮಹಬೂಬ್‌ನಗರದ ಜಿಲ್ಲಾ ನ್ಯಾಯಾಧೀಶ ಕೊಲ್ಲ ರಂಗ ರಾವ್, ಹೈದರಾಬಾದ್‌ನ ಮೆಟ್ರೊಪೊಲಿಟನ್ ಸೆಶನ್ಸ್ ನ್ಯಾಯಾಧೀಶ ಎಸ್. ರಾಧಾಕೃಷ್ಣ ಮೂರ್ತಿ, ಜಗಿತಿಯಲ್ ಜಿಲ್ಲಾ ನ್ಯಾಯಾಲಯದ ಕಿರಿಯ ಪೌರ ನ್ಯಾಯಾಧೀಶ ಎಸ್.ಮಧು, ಹೈದರಾಬಾದ್ ಕಾರ್ಮಿಕರ ನ್ಯಾಯಾಲಯದ ನ್ಯಾಯಾಧೀಶ ಎಂ.ಗಾಂಧಿಯನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆಗೊಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News