ಸಚಿನ್ ತೆಂಡುಲ್ಕರ್ ಟೆಸ್ಟ್ ಪ್ರವೇಶಕ್ಕೆ 29 ವರ್ಷ

Update: 2018-11-15 18:33 GMT

ಹೊಸದಿಲ್ಲಿ, ನ.15: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿ ನ.15ಕ್ಕೆ 29 ವರ್ಷಗಳು ಸಂದಿವೆ. 1989, ನ.15ರಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಆಡುವ ಮೂಲಕ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ರಂಗ ಪ್ರವೇಶಿಸಿದ್ದರು.

ಸಚಿನ್ ತೆಂಡುಲ್ಕರ್ ಟೆಸ್ಟ್ ಆಡುವಾಗ ಅವರಿಗೆ ವಯಸ್ಸು 16. ಬಳಿಕ ಅವರು 24 ವರ್ಷಗಳ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಬರೆದು ಕ್ರಿಕೆಟ್‌ನಲ್ಲಿ ಎತ್ತರದ ಸ್ಥಾನಕ್ಕೆ ಏರಿದ್ದು ಈಗ ಇತಿಹಾಸ. ತನ್ನ ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ 24 ಎಸೆತಗಳನ್ನು ಎದುರಿಸಿ 2 ಬೌಂಡರಿಗಳ ನೆರವಿನಲ್ಲಿ 15 ರನ್ ಗಳಿಸಿ ಪಾಕಿಸ್ತಾನದ ವಕಾರ್ ಯೂನಿಸ್ ಎಸೆತದಲ್ಲಿ ಬೌಲ್ಡ್ ಆಗಿದ್ದರು. ಹೀಗೆ ಸಚಿನ್‌ರ ಟೆಸ್ಟ್ ಕ್ರಿಕೆಟ್ ಬದುಕು ಆರಂಭಗೊಂಡಿತ್ತು. 200 ಟೆಸ್ಟ್‌ಗಳನ್ನು ಆಡಿದ ಸಚಿನ್ 53.78 ಸರಾಸರಿಯಂತೆ 15, 921 ರನ್ ದಾಖಲಿಸಿದ್ದರು. 51 ಶತಕ ಮತ್ತು 68 ಅರ್ಧಶತಕ ಮತ್ತು 46 ವಿಕೆಟ್‌ಗಳನ್ನು ಗಳಿಸಿದ್ದರು. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426ರನ್, 49 ಶತಕ, 96 ಅರ್ಧಶತಕ 154 ವಿಕೆಟ್ ಪಡೆದರು.

ಸಚಿನ್ ಸೇರಿದಂತೆ ನಾಲ್ವರು ಒಂದೇ ದಿನ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು. ಭಾರತದ ಸಲೀಲ್ ಅಂಕೋಲಾ, ಪಾಕಿಸ್ತಾನದ ವಕಾರ್ ಯೂನಿಸ್ ಮತ್ತು ಶಾಹಿದ್ ಸಯೀದ್ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ ಇತರ ಮೂವರು ಆಟಗಾರರು. ಇದೇ ಟೆಸ್ಟ್ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ 100 ಟೆಸ್ಟ್ ಆಗಿತ್ತು. ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 7 ವಿಕೆಟ್ ಉಡಾಯಿಸಿದ ಕಪಿಲ್ ದೇವ್ 350 ವಿಕೆಟ್‌ಗಳ ಮೈಲುಗಲ್ಲನ್ನು ಮುಟ್ಟಿದರು. ಮೊದಲ ಇನಿಂಗ್ಸ್‌ನಲ್ಲಿ ಕಪಿಲ್ ದೇವ್ ಅರ್ಧಶತಕ (55) ದಾಖಲಿಸಿದ್ದರು. ಅಝರುದ್ದೀನ್ ಒಂದೇ ಇನಿಂಗ್ಸ್‌ನಲ್ಲಿ ಐದು ಕ್ಯಾಚ್ ಪಡೆದರು. ಭಾರತದ ಸಂಜಯ್ ಮಾಂಜ್ರೆಕರ್ ಶತಕ(ಔಟಾಗದೆ 113), ಮೊದಲ ಇನಿಂಗ್ ್ಸನಲ್ಲಿ ಇಮ್ರಾನ್ ಖಾನ್ ಶತಕ(ಔಟಾಗದೆ 109), ಎರಡನೇ ಇನಿಂಗ್ಸ್‌ನಲ್ಲಿ ಸಲೀಮ್ ಮಲಿಕ್ ಶತಕ(ಔಟಾಗದೆ 102) ಗಳಿಸಿದ್ದರು. ಗೆಲುವಿಗೆ 403 ರನ್‌ಗಳ ಸವಾಲನ್ನು ಪಡೆದ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಆದರೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಕಪಿಲ್ ದೇವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪೈಕಿ ಸಚಿನ್ ತೆಂಡುಲ್ಕರ್ ಮತ್ತು ವಕಾರ್ ಯೂನಿಸ್ ಕ್ರಿಕೆಟ್ ರಂಗದಲ್ಲಿ ಮಿಂಚಿ, ದಂತಕತೆಗಳೆನಿಸಿಕೊಂಡರು. ಮೊದಲ ಟೆಸ್ಟ್‌ನಲ್ಲಿ ವಕಾರ್ 4 ವಿಕೆಟ್, ಶಾಹೀದ್ ಸಯೀದ್ 12ರನ್, ಸಲೀಲ್ 2 ವಿಕೆಟ್ ಪಡೆದರು. ಸಯೀದ್ ಮತ್ತು ಸಲೀಲ್ ಪಾಲಿಗೆ ಇದು ಚೊಚ್ಚಲ ಮತ್ತು ಕೊನೆಯ ಟೆಸ್ಟ್ ಎನಿಸಿಕೊಂಡಿತು. ಅವರಿಗೆ ಮತ್ತೆ ಟೆಸ್ಟ್ ಆಡುವ ಅವಕಾಶ ಸಿಗಲಿಲ್ಲ.

 ವಕಾರ್ ಯೂನಿಸ್ 83 ಟೆಸ್ಟ್‌ಗಳಲ್ಲಿ 373 ವಿಕೆಟ್ ಮತ್ತು 262 ಏಕದಿನ ಪಂದ್ಯಗಳಳ್ಲಿ 416 ವಿಕೆಟ್ ಉಡಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News