ಐಪಿಎಲ್: ಡುಮಿನಿ, ಪ್ಯಾಟ್ ಕಮಿನ್ಸ್ ರನ್ನು ತಂಡದಿಂದ ಮುಕ್ತಗೊಳಿಸಿದ ಮುಂಬೈ

Update: 2018-11-15 18:39 GMT

ಮುಂಬೈ, ನ.15: ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಜೆಪಿ ಡುಮಿನಿ, ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯ), ಮುಸ್ತಫಿಝುರ್ರಹ್ಮಾನ್(ಬಾಂಗ್ಲಾದೇಶ) ಹಾಗೂ ಶ್ರೀಲಂಕಾದ ಸ್ಪಿನ್ನರ್ ಅಖಿಲ ಧನಂಜಯರನ್ನು ತಂಡದಿಂದ ಮುಕ್ತಗೊಳಿಸಿರುವ ಮುಂಬೈ ಇಂಡಿಯನ್ಸ್ 2019ರ ಐಪಿಎಲ್‌ಗೆ 18 ಆಟಗಾರರನ್ನು ಉಳಿಸಿಕೊಂಡಿದೆ.

ಕಮಿನ್ಸ್‌ರನ್ನು ಮುಂಬೈ ತಂಡ 5.4 ಕೋ.ರೂ.ಗೆ ಖರೀದಿಸಿತ್ತು. ಆದರೆ, ಅವರು 2018ರ ಐಪಿಎಲ್ ಟೂರ್ನಿ ಆರಂಭಕ್ಕೆ ಮೊದಲೇ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದರು. ಮುಸ್ತಫಿಝುರ್ರಹ್ಮಾನ್ 2.2 ಕೋ.ರೂ.ಗೆ ಖರೀದಿಸಲ್ಪಟ್ಟಿದ್ದರು. ಆದರೆ, ಅವರು ಕಳೆದ ಋತುವಿನಲ್ಲಿ ಕೇವಲ 7 ಪಂದ್ಯಗಳನ್ನು ಆಡಿದ್ದರು. 7 ವಿಕೆಟ್‌ಗಳನ್ನಷ್ಟೇ ಕಬಳಿಸಲು ಶಕ್ತರಾಗಿದ್ದಾರೆ. 1 ಕೋ.ರೂ.ಗೆ ಖರೀದಿಸಲ್ಪಟ್ಟಿದ್ದ ಡುಮಿನಿ ಕೇವಲ 6 ಪಂದ್ಯಗಳನ್ನು ಆಡಿ 36 ರನ್ ಗಳಿಸಲಷ್ಟೇ ಸಮರ್ಥರಾಗಿದ್ದರು. ಮುಂಬೈ ತಂಡ ಆರು ದೇಶೀಯ ಕ್ರಿಕೆಟಿಗರಾದ-ಸೌರಭ್ ತಿವಾರಿ, ಪ್ರದೀಪ್ ಸಾಂಗ್ವಾನ್, ಶರದ್ ಲುಂಬಾ, ತೇಜಿಂದರ್ ಸಿಂಗ್ ದಿಲ್ಲೋನ್, ಮೊಹ್ಸಿನ್ ಖಾನ್ ಹಾಗೂ ಎಂಡಿ ನಿದೀಶ್‌ರನ್ನು ತಂಡದಿಂದ ಬಿಡುಗಡೆಗೊಳಿಸಿದೆ.

ನಾಯಕ ರೋಹಿತ್ ಶರ್ಮಾ, ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕೃನಾಲ್, ಜಸ್‌ಪ್ರಿತ್ ಬುಮ್ರಾ, ಮಯಾಂಕ್ ಮರ್ಕಂಡೆ, ಆದಿತ್ಯ ತಾರೆ, ಇಶಾನ್ ಕಿಶನ್, ರಾಹುಲ್ ಚಹಾರ್, ಅನುಕೂಲ್ ರಾಯ್ ಹಾಗೂ ಸೂರ್ಯಕುಮಾರ್ ಯಾದವ್ 3 ಬಾರಿಯ ಚಾಂಪಿಯನ್ ಮುಂಬೈ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಮುಂಬೈ ಉಳಿಸಿಕೊಂಡಿರುವ ಆಟಗಾರರು

► ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ, ಜಸ್‌ಪ್ರಿತ್ ಬುಮ್ರಾ, ಕೃನಾಲ್ ಪಾಂಡ್ಯ, ಇಶಾನ್ ಕಿಶನ್(ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಮಯಾಂಕ್ ಮರ್ಕಂಡೆ, ರಾಹುಲ್ ಚಹಾರ್, ಅನುಕೂಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕ್ವಿಂಟನ್ ಡಿಕಾಕ್, ಕಿರೊನ್ ಪೊಲಾರ್ಡ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ಲಿನಘನ್, ಆಡಮ್ ಮಿಲ್ನೆ, ಜೇಸನ್ ಬೆಹ್ರೆನ್‌ಡ್ರೊಫ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News