ತಮಿಳುನಾಡು: ‘ಗಜ’ ಚಂಡಮಾರುತದ ಅಬ್ಬರಕ್ಕೆ 20 ಮಂದಿ ಬಲಿ

Update: 2018-11-16 15:11 GMT

ಚೆನ್ನೈ, ನ.16: ಶುಕ್ರವಾರ ಬೆಳಗ್ಗೆ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಹಾದು ಹೋಗಿರುವ ‘ಗಜ’ ಚಂಡಮಾರುತ ತೀವ್ರ ಅನಾಹುತ ಸೃಷ್ಟಿಸಿದ್ದು, 20 ಮಂದಿ ಮೃತಪಟ್ಟಿದ್ದಾರೆ. ನಾಗಪಟ್ಟಿನಂ ಹಾಗೂ ಕಾರೈಕಲ್ ಜಿಲ್ಲೆಯಲ್ಲಿ ನೂರಾರು ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಈ ಮಧ್ಯೆ, ರಾಜ್ಯ ಸರಕಾರಕ್ಕೆ ಸರ್ವರೀತಿಯ ನೆರವು ನೀಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ. ತಮಿಳುನಾಡಿನಲ್ಲಿ ಚಂಡಮಾರುತದ ಬಳಿಕದ ಸ್ಥಿತಿಗತಿಯ ಪರಿಶೀಲನೆ ನಡೆಸಿ ಸರಕಾರಕ್ಕೆ ಸರ್ವ ರೀತಿಯ ನೆರವು ಒದಗಿಸುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ನಾಗಪಟ್ಟಿನಂ ಮತ್ತು ವೇದಾರಣ್ಯಂ ತೀರಪ್ರದೇಶದ ಮಧ್ಯೆ ಚಂಡಮಾರುತ ಹಾದುಹೋಗಿದ್ದು, ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದೆ. ನಾಗಪಟ್ಟಿನಂ ಜಿಲ್ಲೆಯಲ್ಲಿ ವಿದ್ಯುತ್ ವ್ಯವಸ್ಥೆ ಕಡಿದುಹೋಗಿದೆ. ಸೇಲಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಮೃತಪಟ್ಟವರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ.ಗಳ ಪರಿಹಾರ, ತೀವ್ರ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ, ಸಣ್ಣಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ನೀಡಲಾಗುವುದು. ಮೀನುಗಾರಿಕಾ ಕ್ಷೇತ್ರದ ಸಹಿತ ಚಂಡಮಾರುತದಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಗಂಟೆಗೆ 110ರಿಂದ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು ಹಲವು ಮನೆಗಳಿಗೂ ಹಾನಿಯಾಗಿದೆ. ತಗ್ಗುಪ್ರದೇಶಗಳಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತದಿಂದಾಗಿ ಹಲವೆಡೆ ಭಾರೀ ಮಳೆಯಾಗಿದೆ. ತೀವ್ರ ಚಂಡಮಾರುತದಿಂದ ಆಗಿರುವ ನಾಶನಷ್ಟದ ಬಗ್ಗೆ ವಿವರವಾದ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಮಧ್ಯೆ, ಚಂಡಮಾರುತದ ಹಾವಳಿಯನ್ನು ಎದುರಿಸುವ ನಿಟ್ಟಿನಲ್ಲಿ ರಾಜ್ಯದ ವಿಪತ್ತು ನಿರ್ವಹಣಾ ಮಂಡಳಿ ನಡೆಸಿರುವ ಕಾರ್ಯವನ್ನು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಶ್ಲಾಘಿಸಿದ್ದಾರೆ. ಚಂಡಮಾರುತ ರಾಜ್ಯವನ್ನು ಪ್ರವೇಶಿಸುವ ಮೊದಲೇ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಕಾರ್ಯಾಚರಣೆ ಆರಂಭಿಸಿದ ವಿಪತ್ತು ನಿರ್ವಹಣಾ ಮಂಡಳಿಯ ಕಾರ್ಯ ಶ್ಲಾಘನೀಯ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News