ತ್ರಿಪುರಾ: ಮಾಣಿಕ್ ಸರ್ಕಾರ್ ಬೆಂಗಾವಲು ವಾಹನದ ಮೇಲೆ ದಾಳಿ

Update: 2018-11-17 04:05 GMT
ಮಾಣಿಕ್ ಸರ್ಕಾರ್

ಅಗರ್ತಲ, ನ. 17: ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಹಿರಿಯ ಸಿಪಿಎಂ ಮುಖಂಡರ ಬೆಂಗಾವಲು ವಾಹನದ ಮೇಲೆ ಶುಕ್ರವಾರ ಸಂಜೆ ಅಪರಿಚಿತರು ದಾಳಿ ಮಾಡಿರುವ ಘಟನೆ ಸಿಪಾಹಿಜಾಲ ಜಿಲ್ಲೆಯ ರಾಷ್ಟ್ರರ್‌ಮಠ ಎಂಬಲ್ಲಿ ನಡೆದಿದೆ.

ನವೆಂಬರ್ ಕ್ರಾಂತಿಯ ಆಚರಣೆ ಸಂಬಂಧ ಸಭೆಯೊಂದರಲ್ಲಿ ಭಾಗವಹಿಸಿ ರಾಜಧಾನಿಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಸಿಪಿಎಂ ಈ ಘಟನೆಯನ್ನು ಪ್ರಜಾಪ್ರಭುತ್ವ ವಿರೋಧಿ ಹಾಗೂ ಫ್ಯಾಸಿಸ್ಟ್ ಕೃತ್ಯ ಎಂದು ಖಂಡಿಸಿದೆ. ಘಟನೆಯಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳ ಕೈವಾಡ ಇದೆ ಎಂದು ಆಪಾದಿಸಿದೆ. ಸರ್ಕಾರ್ ಅವರ ಜತೆಗೆ ಸಿಪಿಎಂ ಮುಖಂಡರಾದ ಮಾಜಿ ಹಣಕಾಸು ಸಚಿವ ಭನೂಲಾಲ್ ಸಹಾ, ಸೊನಮುರಾ ಶಾಸಕ ಶ್ಯಾಮಲ್ ಚಕ್ರವರ್ತಿ, ಅಲ್ಪಸಂಖ್ಯಾತರ ಖಾತೆ ಮಾಜಿ ಸಚಿವ ಶಾಹೀದ್ ಚೌಧರಿ ಮತ್ತು ಕಮಲಸಾಗರ ಶಾಸಕ ನಾರಾಯಣ ಚೌಧರಿ ಇದ್ದರು. ಪೊಲೀಸರು ಇವರನ್ನು ರಕ್ಷಿಸಿ, ಅಗರ್ತಲಗೆ ಸುರಕ್ಷಿತವಾಗಿ ಕರೆತಂದರು.

"ಪಕ್ಷದ ಬಿಶಾಲ್‌ಗಢ ಕಚೇರಿಯಲ್ಲಿ ಸಿಪಿಎಂ ಸಭೆ ಮಧ್ಯಾಹ್ನ 1.30ಕ್ಕೆ ಆರಂಭವಾಗಿ 4 ಗಂಟೆವರೆಗೂ ನಡೆದಿತ್ತು. ಸಭೆ ಬಳಿಕ ಎಲ್ಲರೂ ಅತರ್ಗಲಗೆ ವಾಪಸ್ಸಾಗುತ್ತಿದ್ದಾಗ ಈ ದಾಳಿ ನಡೆದಿದೆ" ಎಂದು ಪೊಲೀಸರು ಹೇಳಿದ್ದಾರೆ.

ಶಾಸಕ ನಾರಾಯಣ ಚೌಧರಿಯ ಇಬ್ಬರು ಬೆಂಬಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲ ಬೆಂಗಾವಲು ವಾಹನಗಳು ಜಖಂಗೊಂಡಿವೆ.
ಇಂಥ ಘಟನೆ ಗಮನಕ್ಕೆ ಬಂದಿಲ್ಲ ಎಂದು ಬಿಜೆಪಿ ವಕ್ತಾರ ಡಾ. ಅಶೋಕ್ ಸಿನ್ಹಾ ಹೇಳಿದ್ದಾರೆ.

ಘಟನೆಯನ್ನು ಅನಪೇಕ್ಷಿತ ಎಂದು ಬಣ್ಣಿಸಿ, ಅವರು ಖಂಡಿಸಿದ್ದಾರೆ. "ಅಂಥ ಘಟನೆ ನಡೆದಿದ್ದರೆ ಅದು ಖೇದಕರ. ಇದರ ಸತ್ಯವನ್ನು ಪತ್ತೆ ಮಾಡಿ ತಪ್ಪಿತಸ್ಥರಿಗೆ ಸರ್ಕಾರ ಸೂಕ್ತ ಶಿಕ್ಷೆ ನೀಡಲಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News