‘ರಾಕೆಟ್ ಮಹಿಳೆ ’ ದಾಕ್ಷಾಯಣಿ

Update: 2018-11-17 11:15 GMT

ಅವರು ಅಡುಗೆ ಮಾಡುತ್ತಲೇ ಮಂಗಳನ ಕಕ್ಷೆಯಲ್ಲಿ ಉಪಗ್ರಹಕ್ಕೆ ಮಾರ್ಗದರ್ಶನವನ್ನೂ ನೀಡುತ್ತಿದ್ದರು !

ನೀವು ಮಂಗಳನ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಕ್ಕೆ ಮಾರ್ಗದರ್ಶನ ನೀಡಬಲ್ಲಿರಾ ಮತ್ತು ಬೆಳಿಗ್ಗೆ ಹಾಗೂ ರಾತ್ರಿ ಎಂಟು ಜನರಿಗಾಗಿ ಅಡುಗೆಯನ್ನೂ ಮಾಡಬಲ್ಲಿರಾ? ಹೌದು,ಅದು ಸಾಧ್ಯವಿದೆ. ಆದರೆ ನೀವು ನಸುಕಿನ ಐದು ಗಂಟೆಗೆ ಎದ್ದರೆ ಮತ್ತು ನಿಮ್ಮ ಹೆಸರು ಬಿ.ಪಿ.ದಾಕ್ಷಾಯಣಿ ಆಗಿದ್ದರೆ ಮಾತ್ರ! ಇವೆರಡೂ ಕೆಲಸಗಳನ್ನು ಜೊತೆಜೊತೆಯಾಗಿ ನಿರ್ವಹಿಸಿದ ಇಸ್ರೋದ ಫ್ಲೈಟ್ ಡೈನಾಮಿಕ್ಸ್ ಮತ್ತು ಸ್ಪೇಸ್ ನೇವಿಗೇಷನ್ ವಿಭಾಗದ ಮಾಜಿ ಮುಖ್ಯಸ್ಥೆಯ ಸಾಧನೆಯ ಕಥೆ ಇಲ್ಲಿದೆ.....

ದಾಕ್ಷಾಯಣಿ ಮತ್ತು ಅವರ ತಂಡದ ಸದಸ್ಯರು ‘ರಾಕೆಟ್ ಮಹಿಳೆಯರು’ ಅಥವಾ ‘ಮಂಗಳ ಗ್ರಹದ ಮಹಿಳೆಯರು’ ಎಂದೇ ಹೆಸರಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಭಾರತೀಯ ಬಾಹ್ಯಾಕಾಶ ನೌಕೆ ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದನ್ನು ಸಂಭ್ರಮಿಸುತ್ತಿದ್ದ ಮಹಿಳೆಯರ ಗುಂಪೊಂದರ ಚಿತ್ರವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು,ಅದು ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹಿಳೆಯರ ಪಾತ್ರದ ಮೇಲೆ ಬೆಳಕು ಚೆಲ್ಲಿತ್ತು ಮತ್ತು ದಾಕ್ಷಾಯಣಿ ಈ ಮಹಿಳೆಯರಲ್ಲಿ ಓರ್ವರಾಗಿದ್ದರು.

ಉಪಗ್ರಹದ ಮೇಲೆ ನಿಗಾಯಿರಿಸಿದ್ದ,ಅದರ ಪಥವನ್ನು ನಿರ್ದೇಶಿಸುತ್ತಿದ್ದ ಮತ್ತು ಅದು ಅದು ತನ್ನ ಪಥವನ್ನು ತಪ್ಪಿಸಿಕೊಳ್ಳದಂತೆ ಕಾಳಜಿ ವಹಿಸಿದ್ದ ತಂಡದ ನೇತೃತ್ವವನ್ನು ದಾಕ್ಷಾಯಣಿ ವಹಿಸಿಕೊಂಡಿದ್ದರು.

ಅವರ ಮಹಿಳಾ ಸಹೋದ್ಯೋಗಿಯೋರ್ವರು ಬಣ್ಣಿಸಿರುವಂತೆ ಈ ಕಾರ್ಯ ಭಾರತದಲ್ಲಿ ಗಾಲ್ಫ್ ಬಾಲ್‌ನ್ನು ಹೊಡೆದು ಅದು ಲಾಸ್ ಏಂಜೆಲ್ಸ್‌ನಲ್ಲಿರುವ,ಅದೂ ನಿರಂತರವಾಗಿ ಚಲಿಸುತ್ತಿರುವ ಕುಳಿಯನ್ನು ಸೇರುತ್ತದೆ ಎಂದು ನಿರೀಕ್ಷಿಸಿದಂತಿತ್ತು.

ಇದೊಂದು ಕಠಿಣ ಕೆಲಸವಾಗಿತ್ತು ಮತ್ತು ಭಾರತೀಯ ಗೃಹಿಣಿಯ ಜವಾಬ್ದಾರಿಗಳು ಅದನ್ನು ಇನ್ನಷ್ಟು ಕಠಿಣವಾಗಿಸಿದ್ದವು. ಆದರೆ ವರ್ಷಗಳ ಹಿಂದೆ ಸಾಂಪ್ರದಾಯಿಕ, ಮಡಿವಂತ ಕುಟುಂಬದ ಬಾಲಕಿ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಂಡಿದ್ದಾಗಲೇ ಆಕೆಯ ಇಚ್ಛಾಶಕ್ತಿ ಸ್ಪಷ್ಟವಾಗಿ ಪ್ರಕಟಗೊಂಡಿತ್ತು.

ಕರ್ನಾಟಕದ ಭದ್ರಾವತಿಯ ದಾಕ್ಷಾಯಣಿ 1960ರ ದಶಕದಲ್ಲಿ ಇನ್ನೂ ಬಾಲಕಿಯಾಗಿದ್ದಾಲೇ ಅವರ ತಂದೆ ಮಗಳ ಆಸಕ್ತಿಯನ್ನು ಉತ್ತೇಜಿಸಿದ್ದರು. ಆಗ ಇಡೀ ಭದ್ರಾವತಿ ಪಟ್ಟಣದಲ್ಲಿ ಇಂಜಿನಿಯರಿಂಗ್ ಓದಿದ್ದ ಒಬ್ಬರೇ ಮಹಿಳೆಯಿದ್ದರು. ಅವರ ಮನೆಯ ಎದುರಿನಿಂದ ಹಾದು ಹೋಗುವಾಗಲೆಲ್ಲ ಅವರ ದರ್ಶನಕ್ಕಾಗಿ ದಾಕ್ಷಾಯಣಿ ಕಾತರಿಸುತ್ತಿದ್ದರು.

ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ ಗಗನಕುಸುಮವಾಗಿತ್ತು. ಆದರೆ ತಂದೆ ಮಗಳ ಬಯಕೆಯಂತೆ ಇಂಜಿನಿಯರಿಂಗ್ ಓದಿಸಿದ್ದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನೂ ಪೂರೈಸಿದ್ದರು.

ವ್ಯಾಸಂಗದ ಬಳಿಕ ದಾಕ್ಷಾಯಣಿ ಕಾಲೇಜೊಂದರಲ್ಲಿ ಗಣಿತ ಶಿಕ್ಷಕಿಯಾಗಿ ಸೇರಿಕೊಂಡಿದ್ದರೂ ಬಾಹ್ಯಾಕಾಶ ಮತ್ತು ಉಪಗ್ರಹಗಳಲ್ಲಿ ಅವರ ಆಸಕ್ತಿ ದಿನೇದಿನೇ ಗಾಢವಾಗುತ್ತಲೇ ಇತ್ತು. 1984ರಲ್ಲಿ ಇಸ್ರೋದಲ್ಲಿ ನೇಮಕಗೊಂಡ ಅವರನ್ನು ಆರ್ಬಿಟಲ್ ಡೈನಾಮಿಕ್ಸ್ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಅವರಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಾರ್ಯವನ್ನು ನೀಡಲಾಗಿತ್ತು. ಅಲ್ಲಿಯವರೆಗೆ ಅವರು ಕಂಪ್ಯೂಟರ್‌ನ್ನೇ ನೋಡಿರಲಿಲ್ಲ. ಕಂಪ್ಯೂಟರ್‌ಗಳು ಅಪರೂಪವಾಗಿದ್ದ ಆಗಿನ ಕಾಲದಲ್ಲಿ ಅದು ಸಹಜವೇ ಆಗಿತ್ತು. ಇನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಕನಸನ್ನೂ ಜನರು ಕಂಡಿರಲಿಲ್ಲ. ಆದರೆ ದಾಕ್ಷಾಯಣಿಯವರ ಬಳಿ ಪುಸ್ತಕಗಳಿದ್ದವು. ಪ್ರತಿ ದಿನ ಸಂಜೆ ಮನಗೆ ಮರಳಿದ ಬಳಿಕ ಅವರು ಆ ಪುಸ್ತಕಗಳಲ್ಲಿಯೇ ಮುಳುಗಿರುತ್ತಿದ್ದರು ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಪಳಗಿದ್ದರು. ಇದೇ ವೇಳೆ ಇತರ ಮನೆಗೆಲಸಗಳನ್ನೂ ಅವರು ನಿರ್ವಹಿಸುತ್ತಿದ್ದರು.

ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಮೂಳೆತಜ್ಞ ಡಾ.ಮಂಜುನಾಥ ಬಸವಲಿಂಗಪ್ಪ ಅವರನ್ನು ಮದುವೆಯಾಗಿ ತುಂಬಿದ ಮನೆಯನ್ನು ಸೇರಿದ್ದ ದಾಕ್ಷಾಯಣಿಯವರ ಹೆಗಲ ಮೆಲೆ ಏಕಾಏಕಿ ಸಂಸಾರದ ಹೊಣೆಗಾರಿಕೆ ಕುಳಿತಿತ್ತು. ಕಚೇರಿಯಲ್ಲಿ ಉಪಗ್ರಹಗಳಿಗೆ ಮಾರ್ಗದರ್ಶನ ನೀಡಲು ಸಂಕೀರ್ಣ ಲೆಕ್ಕಾಚಾರಗಳ ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನಿರ್ವಹಿಸುತ್ತಿದ್ದ ಅವರಿಗೆ ಅತ್ತೆ-ಮಾವ,ಪತಿಯ ಐವರು ಒಡಹುಟ್ಟಿದವರು ಮತ್ತು ಕೆಲವು ವರ್ಷಗಳ ಬಳಿಕ ತನ್ನದೇ ಇಬ್ಬರು ಮಕ್ಕಳಿಂದ ಕೂಡಿದ ದೊಡ್ಡ ಕುಟುಂಬವನ್ನು ನೋಡಿಕೊಳ್ಳಬೇಕಿತ್ತು.

ಮನೆಯ ಅಷ್ಟೂ ಜನರಿಗೆ ಚಹಾ-ತಿಂಡಿ ಮತ್ತು ಊಟದ ತಯಾರಿಯ ಜವಾಬ್ದಾರಿ ದಾಕ್ಷಾಯಣಿಯವರದ್ದೇ ಆಗಿತ್ತು. ಬೆಳಿಗ್ಗೆ ಐದು ಗಂಟೆಗೇ ಎದ್ದು ಅದಷ್ಟೂ ಕೆಲಸಗಳನ್ನು ಪೂರೈಸಿ ಕಚೇರಿಕೆ ತೆರಳುತ್ತಿದ್ದರು. ಸಂಜೆ ಮನೆಗೆ ಮರಳಿದಾಗ ರಾತ್ರಿಯ ಊಟವನ್ನು ತಯಾರಿಸುವ ಕೆಲಸ ಅವರಿಗಾಗಿ ಕಾದು ಕುಳಿತಿರುತ್ತಿತ್ತು.

ಒಮ್ಮೆ ಕಚೇರಿ ಸೇರಿಕೊಂಡರೆ ಮನೆಯತ್ತ ಗಮನ ಹರಿಸುವ ವ್ಯವಧಾನವೇ ಅವರಿಗೆ ಸಿಗುತ್ತಿರಲಿಲ್ಲ. ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಮಧ್ಯಾಹ್ನ ಒಂದು ದೂರವಾಣಿ ಕರೆಯನ್ನು ಮಾಡುವುದೇ ದೊಡ್ಡದಾಗಿತ್ತು. ಕೆಲವೊಮ್ಮೆ ರಾತ್ರಿ ಎರಡು ಗಂಟೆಯವರೆಗೂ ಅಧ್ಯಯನದಲ್ಲಿ ತೊಡಗಿರುತ್ತಿದ್ದ ಅವರು ನಸುಕಿನ ಐದು ಗಂಟೆಗೇ ಏಳುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ.

ನಾನು ಸಣ್ಣ ಸಣ್ಣ ಪರಿಷ್ಕರಣೆಗಳನ್ನು ಮಾಡುತ್ತಲೇ ಇರುತ್ತೇನೆ ಮತ್ತು ಹೊಸದನ್ನು ಆವಿಷ್ಕರಿಸಲು ಯತ್ನಿಸುತ್ತಲೇ ಇರುತ್ತೇನೆ. ಅಡುಗೆ ಮಾಡುವುದು ಕೋಡಿಂಗ್ ಇದ್ದಂತೆ. ಕೋಡಿಂಗ್‌ನಲ್ಲಿ ಒಂದೇ ಒಂದು ಸಣ್ಣ ಬದಲಾವಣೆಯೂ ವಿಭಿನ್ನ ಫಲಿತಾಂಶವನ್ನು ನೀಡುತ್ತದೆ,ಹಾಗೆಯೇ ಅಡುಗೆ ಮಾಡುವಾಗ ಸಣ್ಣ ಬದಲಾವಣೆಯೂ ವಿಭಿನ್ನ ರುಚಿಯನ್ನು ನೀಡುತ್ತದೆ ಎನ್ನುತ್ತಾರೆ ದಾಕ್ಷಾಯಣಿ.

ದಾಕ್ಷಾಯಣಿಯವರ ಸಾಧನೆಯಲ್ಲಿ ಪತಿ ಬಸವಲಿಂಗಪ್ಪನವರ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಆರಂಭದಲ್ಲಿ ಪತ್ನಿಯ ಕೆಲಸದ ಬಗ್ಗೆ ಹೆಚ್ಚಿನ ಅರಿವಿರದ ಅವರಿಗೆ ಕ್ರಮೇಣ ಅದರ ಮಹತ್ವ ಅರ್ಥವಾಗಿತ್ತು. ಇಂದು ಪತ್ನಿಯ ಬಗ್ಗೆ ಮತ್ತು ಮಂಗಳ ಅಭಿಯಾನದಲ್ಲಿ ಅವರ ಸಾಧನೆಯ ಬಗ್ಗೆ ಬಸವಲಿಂಗಪ್ಪ ಹೆಮ್ಮೆಯನ್ನು ಹೊಂದಿದ್ದಾರೆ. ಸ್ಪೇಸ್ ಕ್ಯಾಪ್ಸೂಲ್ ಪೃಥ್ವಿಯ ವಾತಾವರಣವನ್ನು ಮರುಪ್ರವೇಶಿಸುವಾಗ ಉರಿದು ಹೋಗದಂತೆ ಮತ್ತು ಅದು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯುವಂತೆ ನಿಖರ ಲೆಕ್ಕಾಚಾರಗಳನ್ನು ಮಾಡುತ್ತಿದ್ದ ಪತ್ನಿಯ ಬಗ್ಗೆ ಎಷ್ಟು ಹೇಳಿಕೊಂಡರೂ ಅವರಿಗೆ ಸಾಲದು.

ಇಂದು ದಾಕ್ಷಾಯಣಿಯವರಿಗೆೆ ಮನೆಯಲ್ಲಿ ಅಷ್ಟೊಂದು ಕಾರ್ಯಭಾರವಿಲ್ಲ. ಅವರ ಪುತ್ರ ಮತ್ತು ಪುತ್ರಿ ಇಬ್ಬರೂ ತಾಯಿಯಂತೆ ಇಂಜಿನಿಯರ್‌ಗಳಾಗಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ.

ಅಂದ ಹಾಗೆ ಕೆಲಸದಿಂದ ಸಂಪೂರ್ಣ ನಿವೃತ್ತಿ ಪಡೆಯುವ ಆಲೋಚನೆ ದಾಕ್ಷಾಯಣಿ ಅವರಿಗಿಲ್ಲ. ಅವರು ಮಂಗಳ ಗ್ರಹದ ಬಗ್ಗೆ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದಾರೆ. ಪೃಥ್ವಿ ಮತ್ತು ಮಂಗಳ ಗ್ರಹದ ನಡುವಿನ ವ್ಯತ್ಯಾಸಗಳು ಮತ್ತು ಹೋಲಿಕೆಗಳ ಬಗ್ಗೆ ಅವರು ಅಧಿಕಾರವಾಣಿಯಿಂದ ಮಾತನಾಡಬಲ್ಲರು. ತಾನು ಮಂಗಳನನ್ನು ತುಂಬ ಪ್ರೀತಿಸುತ್ತೇನೆ,ಆ ಗ್ರಹದಲ್ಲಿ ವಾಸವಾಗಿರಲು ಬಯಸುತ್ತೇನೆ ಎನ್ನುವ ದಾಕ್ಷಾಯಣಿ ಅದೆಷ್ಟೋ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

ಕೃಪೆ: BBC.COM

Writer - ಗೀತಾ ಪಾಂಡೆ

contributor

Editor - ಗೀತಾ ಪಾಂಡೆ

contributor

Similar News