ಇಸ್ಲಾಂಪುರದ ಬದಲು ಈಶ್ವರಪುರ ಎಂದು ಮುದ್ರಿಸಿದ ಶಾಲೆಯ ನೋಂದಣಿ ರದ್ದು

Update: 2018-11-17 13:46 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ನ.17: ಶಾಲೆಯ ಪ್ರವೇಶ ಸೂಚನಾ ಪತ್ರದಲ್ಲಿ ಇಸ್ಲಾಂಪುರ ಎಂದು ಬರೆಯುವ ಬದಲು ಈಶ್ವರಪುರ ಎಂದು ಮುದ್ರಿಸಿದ ಸರಕಾರಿ ಅಧೀನದ ಶಾಲೆಯೊಂದರ ನೋಂದಣಿಯನ್ನು ಪಶ್ಚಿಮ ಬಂಗಾಲದ ಸರಕಾರ ರದ್ದುಗೊಳಿಸಿದೆ. ಪ.ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಇಸ್ಲಾಂಪುರ ನಗರದ ನೇತಾಜಿ ಪಲ್ಲಿ ಎಂಬಲ್ಲಿರುವ, ವಿದ್ಯಾಭಾರತಿ ಸಂಸ್ಥೆಯ ನಿರ್ವಹಣೆಯಲ್ಲಿರುವ ಸರಸ್ವತಿ ಶಿಶು ಮಂದಿರದ ಪ್ರವೇಶ ಸೂಚನಾ ಪತ್ರದಲ್ಲಿ ಇಸ್ಲಾಂಪುರದ ಬದಲು ಈಶ್ವರಪುರ ಎಂದು ಮುದ್ರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿರುವ ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಸರಕಾರದೊಂದಿಗೆ ಸಂಯೋಜನೆಗೊಂಡಿರುವ ಶಾಲೆಯೊಂದು ನಗರದ ಹೆಸರನ್ನು ಹೇಗೆ ಬದಲಾಯಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

 ಪಶ್ಚಿಮ ಬಂಗಾಳ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಸಂಯೋಜನಾ ಪತ್ರ ಸೇರಿದಂತೆ ಎಲ್ಲಾ ದಾಖಲೆಪತ್ರಗಳನ್ನೂ ಸಂಗ್ರಹಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

ಶಾಲೆಯ ಅಧಿಕೃತ ವ್ಯವಹಾರ ಮತ್ತು ದಾಖಲೆಗಳಲ್ಲಿ ಇಸ್ಲಾಂಪುರ ಎಂದೇ ನಮೂದಿತವಾಗಿದೆ. ಆದರೆ ಈ ಪ್ರದೇಶವನ್ನು ಈಶ್ವರಪುರ ಎಂದೂ ಕರೆಯುವ ಕಾರಣ ಪ್ರವೇಶ ಸೂಚನೆ ಪತ್ರದಲ್ಲಿ ಮಾತ್ರ ಈ ಹೆಸರನ್ನು ನಮೂದಿಸಲಾಗಿದೆ. ಇದನ್ನು ಅನಗತ್ಯವಾಗಿ ವಿವಾದವನ್ನಾಗಿಸಲಾಗಿದೆ. ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಸರಕಾರ ಸಂಯೋಜನೆಯನ್ನು ರದ್ದುಗೊಳಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ಪ್ರಾಂಶುಪಾಲರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರದ ನಿರ್ಧಾರ ದುರದೃಷ್ಟಕರ ಎಂದಿರುವ ವಿದ್ಯಾಭಾರತಿಯ ಉತ್ತರ ಬಂಗಾಳ ವಿಭಾಗದ ಸಂಘಟನಾ ಕಾರ್ಯದರ್ಶಿ ಪಾರ್ಥ ಘೋಷ್, ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.

ಸರಕಾರದ ಈ ನಿರ್ಧಾರದಿಂದ ಹಲವು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಎಬಿವಿಪಿಯ ಮುಖಂಡ ಬಿಮಲ್ ದಾಸ್ ಹೇಳಿದ್ದಾರೆ. ಈ ಪ್ರದೇಶಕ್ಕೆ ಇಸ್ಲಾಂಪುರ ಹಾಗೂ ಈಶ್ವರಪುರ ಎಂಬ ಎರಡು ಹೆಸರಿದೆ.ಬಸ್ ಕಂಡಕ್ಟರ್‌ನಲ್ಲಿ ಈಶ್ವರಪುರ ಎಂದು ತಿಳಿಸಿದರೆ ಆತ ಇಸ್ಲಾಂಪುರದಲ್ಲಿ ನಿಮ್ಮನ್ನು ಇಳಿಸುತ್ತಾನೆ. ಬಂಗಾಳದಲ್ಲಿ ಎರಡು ಹೆಸರುಗಳಿರುವ ಹಲವು ನಗರಗಳಿವೆ. ಮಾಲ್ಡಾ ಜಿಲ್ಲೆಯಲ್ಲಿರುವ ಗರೆಲ್ ಎಂಬ ಪ್ರದೇಶಕ್ಕೆ ಶಿವಾಜಿ ನಗರ ಎಂಬ ಹೆಸರೂ ಇದೆ. ಇದು ಪ.ಬಂಗಾಳದಲ್ಲಿ ಸಹಜವಾಗಿದೆ ಎಂದು ಬಿಮಲ್ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News