ಎಡಿಟರ್ಸ್‌ ಗಿಲ್ಡ್ ಸದಸ್ಯರ ಪಟ್ಟಿಯಲ್ಲಿ ಲೈಂಗಿಕ ಕಿರುಕುಳದ ಆರೋಪಿಗಳಾದ ಎಂ.ಜೆ. ಅಕ್ಬರ್, ತರುಣ್ ತೇಜಪಾಲ್ !

Update: 2018-11-17 16:17 GMT

ಹೊಸದಿಲ್ಲಿ, ನ. 17: ಭಾರತದ ಎಡಿಟರ್ಸ್‌ ಗಿಲ್ಡ್ ತನ್ನ ಸದಸ್ಯರ ಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದು, ಇದರಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾದ ಎಂ.ಜೆ. ಅಕ್ಬರ್ ಹಾಗೂ ತರುಣ್ ತೇಜ್‌ಪಾಲ್ ಅವರ ಹೆಸರು ಕೂಡ ಸೇರಿದೆ.

 ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿರುವ ಹಿರಿಯ ಪತ್ರಕರ್ತ ಗೌತಮ್ ಅಧಿಕಾರಿ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾಗಿರುವವರ ಹೆಸರನ್ನು ತೆಗೆಯುವಂತೆ ಗಿಲ್ಡ್‌ನ ಹಲವು ಸದಸ್ಯರು ಆಗ್ರಹಿಸಿದ ಹೊರತಾಗಿಯೂ ಪಟ್ಟಿಯಲ್ಲಿ ಇವರ ಹೆಸರು ಸೇರಿಕೊಂಡಿದೆ. ಅಕ್ಬರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕನಿಷ್ಠ 20 ಮಹಿಳೆಯರು ಆರೋಪಿಸಿದ್ದಾರೆ. ಭಾರತದಲ್ಲಿ ಮಿಟೂ ಚಳವಳಿ ಆರಂಭವಾದ ಬಳಿಕ ಮಹಿಳೆಯರು ಅಕ್ಬರ್ ವಿರುದ್ಧ ಈ ಆರೋಪ ವ್ಯಕ್ತಪಡಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ 67 ವರ್ಷದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಅಕ್ಟೋಬರ್ 17ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

 ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರ ವಿರುದ್ಧ ಅವರ ಕಿರಿಯ ಸಹೋದ್ಯೋಗಿಯೊಬ್ಬರು 2013 ನವೆಂಬರ್ 7ರಂದು ಅತ್ಯಾಚಾರದ ಆರೋಪ ಮಾಡಿದ್ದರು. ತೆಹಲ್ಕಾ ಪಣಜಿಯ ಗ್ರಾಂಡ್ ಹಯಾಟ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಚಿಂತನಾ ಉತ್ಸವದ ಸಂದರ್ಭ ಇಲೆವೇಟರ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೋರ್ವರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News