ವನಿತೆಯರ ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ ಸತತ ನಾಲ್ಕನೇ ಜಯ

Update: 2018-11-17 18:21 GMT

ಗಯಾನ, ನ.17: ವನಿತೆಯರ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 48 ರನ್‌ಗಳ ಜಯ ಗಳಿಸಿದೆ. ಇದರೊಂದಿಗೆ ಭಾರತ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಗೆಲುವಿಗೆ 168 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ಅನುಜಾ ಪಾಟೀಲ್ (15ಕ್ಕೆ 3), ದೀಪ್ತಿ ಶರ್ಮಾ (24ಕ್ಕೆ 2), ರಾಧಾ ಯಾದವ್(13ಕ್ಕೆ 2) ಮತ್ತು ಪೂನಮ್ ಯಾದವ್ ದಾಳಿಗೆ ಸಿಲುಕಿ 19.4 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟಾಗಿದೆ ಆಸ್ಟ್ರೇಲಿಯ ತಂಡದ ಎಲೈಸ್ ಪೆರ್ರಿ(39) ಗರಿಷ್ಠ ಸ್ಕೋರ್ ದಾಖಲಿಸಿದರು. ಭಾರತ ಇದಕ್ಕೂ ಮೊದಲು 8 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ವನಿತೆಯರ ತಂಡ ಅಗ್ರ ಸರದಿಯ ಇಬ್ಬರು ಆಟಗಾರ್ತಿಯರನ್ನು ಬೇಗನೆ ಕಳೆದುಕೊಂಡಿತ್ತು. ತಾನಿಯಾ ಭಾಟಿಯಾ (2) ಮತ್ತು ಜಮೀಮ ರೋಡ್ರಿಗಸ್ 6 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 3ನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. ಕೌರ್ 43 ರನ್(27ಎ, 3ಬೌ,3ಸಿ) ಗಳಿಸಿದರು. ಮಂಧಾನ 83ರನ್(55ಎ, 9ಬೌ,3ಸಿ) ಗಳಿಸಿ ಶತಕ ವಂಚಿತಗೊಂಡರು. ಇವರನ್ನು ಹೊರತುಪಡಿಸಿದರೆ ಯಾರಿಗೂ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯದ ಎಲೈಸ್ ಪೆರ್ರಿ, 16ಕ್ಕೆ 3, ಅಸ್ಲೇಘ್ ಗಾರ್ಡನರ್ ಮತ್ತು ಡೆಲ್ಲಿಸಾ ಕಿಮ್ಮಿನ್ಸೆ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News