ಪುಟ 109: ನೂರೆಂಟು ಪ್ರಶ್ನೆಗಳ ಕತೆ

Update: 2018-11-20 17:05 GMT

ಆ ಕರಾಳ ರಾತ್ರಿ ಎನ್ನುವ ಸಿನೆಮಾ ನಿರ್ದೇಶಕರಾಗಿ ದಯಾಳ್ ಪದ್ಮನಾಭನ್ ಮೇಲೆ ದೊಡ್ಡ ಜವಾಬ್ದಾರಿಯನ್ನು ತಂದುಕೊಟ್ಟಿದೆ. ಅದೇ ಭರವಸೆ ಮತ್ತು ನಿರೀಕ್ಷೆಯಿಂದ ಪುಟ 109 ಚಿತ್ರ ನೋಡಲು ಹೋದರೆ ನಿರಾಶೆ ಖಚಿತ.

ಅಪರಾಧ ಪ್ರಕರಣದ ತನಿಖೆಯ ಕುರಿತಾದ ಚಿತ್ರಗಳು ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸಂದೇಹಗಳನ್ನು ಮೂಡಿಸುತ್ತಾ ಹೋಗುವುದು ಸಹಜ. ಅಂಥ ಸಂದರ್ಭದಲ್ಲಿ ತನಿಖೆಯ ಚಿತ್ರೀಕರಣಗಳು ಕೂಡ ವಿವಿಧ ಲೊಕೇಶನ್‌ಗಳಿಗೆ ವರ್ಗಾಯಿಸಲ್ಪಡುತ್ತದೆ. ಆದರೆ ಚಿತ್ರ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಸಾಗುತ್ತದೆ ಎನ್ನುವುದು ವಿಭಿನ್ನ ಮತ್ತು ವಿಶೇಷ ಎನ್ನಬಹುದು. ಆದರೆ ಅದೇ ಚಿತ್ರಕ್ಕೆ ಮೈನಸ್ ಕೂಡ ಆಗಿರುವುದು ನಿಜ.

ಜೆಕೆ ಎನ್ನುವ ಪೊಲೀಸ್ ಅಧಿಕಾರಿಯು ಕಾದಂಬರಿಕಾರ ಶ್ರೀಜತಿ ಎನ್ನುವವರ ಮನೆಗೆ ತನಿಖೆಗೆ ಬರುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅದೇ ಮನೆಯಲ್ಲಿಯೇ ಚಿತ್ರದ ಅವಸಾನವೂ ಆಗುತ್ತದೆ. ಅದರ ಮಧ್ಯೆ ಎಲ್ಲೋ ಒಂದು ಐದು ನಿಮಿಷ ಮಾತ್ರ ಕತೆ ಮನೆಯಿಂದ ಹೊರಗೆ ಹೋಗುತ್ತದೆ. ಹಾಗಾಗಿ ಎರಡು ಮುಖ್ಯ ಪಾತ್ರಗಳನ್ನು ಹೊರತುಪಡಿಸಿ ಉಳಿದೆಲ್ಲವೂ ನಾಮಕಾವಸ್ಥೆಗೆ ಎಂಬಂತೆ ಬಂದು ಹೋಗುತ್ತವೆ. ಆದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಎನ್ನುವ ಕಾರಣಕ್ಕೆ ಮಾತ್ರ ಒಂದಷ್ಟು ಸಮಯ ಚಿತ್ರ ಕುತೂಹಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಚಿತ್ರದಲ್ಲಿ ನಿರ್ದೇಶಕರು ಹೆಚ್ಚಿನ ಪಾತ್ರಗಳಿಗೆ ನಿಜವಾದ ಹೆಸರುಗಳನ್ನೇ ಇರಿಸಿದ್ದಾರೆ. ಹಾಗಾಗಿ ನಟ ಜೆಕೆ ಚಿತ್ರದಲ್ಲಿಯೂ ಜೆಕೆಯೇ. ಆದರೆ ಪಾತ್ರ ಮಾತ್ರ ಪೊಲೀಸ್ ಅಧಿಕಾರಿಯದ್ದು. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಲುಕ್ ನಲ್ಲಿ ಕಾಣಿಸಿಕೊಳ್ಳುವ ಜೆಕೆ ಮತ್ತು ಕ್ರೈಮ್ ಕಾದಂಬರಿಗಳ ಲೇಖಕ ಶ್ರೀಜತಿ ಎಂಬ ಕಾದಂಬರಿಕಾರ ನವೀನ್ ಕೃಷ್ಣ ನಡುವೆಯೇ ಚಿತ್ರದ ಪೂರ್ತಿ ಕತೆ ಸಾಗಿ ಬರುತ್ತದೆ.

ಇಬ್ಬರ ಮುಖಾಭಿನಯ ಮತ್ತು ಕಂಠವೇ ಜೀವಾಳ. ಅದನ್ನು ಇಬ್ಬರೂ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ನಾಯಕಿಯಾಗಿ ವೈಷ್ಣವಿಗೆ ಒಂದು ಮರ್ಡರ್ ಮಿಸ್ಟರಿಯಲ್ಲಿನ ಶವಕ್ಕಿರುವ ಪ್ರಾಧಾನ್ಯತೆ ಇದೆ! ಉಳಿದಂತೆ ಅನುಪಮಾ ಗುರುತಿಸಲೂ ಆಗದಷ್ಟು ವೇಗದಲ್ಲಿ ದೃಶ್ಯವೊಂದರಲ್ಲಿ ಬಂದು ಹೋಗುತ್ತಾರೆ. ‘ಆ ಕರಾಳ ರಾತ್ರಿ’ ತಂಡ ಎಂಬ ನಿರೀಕ್ಷೆಯೊಂದಿಗೆ ಬಂದವರಿಗೆ ಇವೆಲ್ಲವೂ ನೆಗೆಟಿವ್ ಆಗಿ ಕಾಡುವ ಸಾಧ್ಯತೆಯೇ ಹೆಚ್ಚು. ಕತೆಯ ವಿಚಾರಕ್ಕೆ ಬಂದರೆ ಈಗಾಗಲೇ ವೆಬ್ ಸಿನೆಮಾವಾಗಿ ತೆರೆಕಂಡು ಮೇಕಿಂಗ್ ವಿಚಾರದಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ತಮಿಳು ಚಿತ್ರ ‘ಕರುಮ’ವೇ ಇದು.

ಮೇಕಿಂಗ್‌ನಲ್ಲಿ ಅದಕ್ಕಿಂತ ಸ್ವಲ್ಪ ರಿಚ್ ಆಗಿದೆ ಎನ್ನುವುದನ್ನು ಹೊರತುಪಡಿಸಿ ಬೇರೆ ದೊಡ್ಡ ವ್ಯತ್ಯಾಸಗಳು ಕಾಣುವುದಿಲ್ಲ. ಕರುಮದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಜೊತೆಗೆ ನಿರ್ದೇಶಕರೂ ಆಗಿದ್ದ ಅರವಿಂದ್ ಅವರೇ ಇಲ್ಲಿಯೂ ತಮ್ಮ ಕತೆ ನೀಡಿರುವುದು ಅದಕ್ಕೆ ಪ್ರಮುಖ ಕಾರಣ. ಆದರೆ ಕಿರುಚಿತ್ರಕ್ಕೆ ಸೀಮಿತವಾಗಿರಬೇಕಾದ ಕತೆಯನ್ನು ಕಮರ್ಷಿಯಲ್ ಸಿನೆಮಾವಾಗಿಸುವ ಪ್ರಯತ್ನದಲ್ಲಿ ಕತೆಯನ್ನು ಎಳೆದಾಡಿದಂತಾಗಿದೆ. ಅದರಲ್ಲಿ ಕೂಡ ಸಸ್ಪೆನ್ಸ್ ಚಿತ್ರದ ಪ್ರಮುಖ ಕ್ಲೂ ಆಗಿರುವ ‘ಪುಟ 109’ ಎನ್ನುವ ಅಂಶವನ್ನೇ ಚಿತ್ರಕ್ಕೆ ಹೆಸರಾಗಿಸಿರುವುದರಿಂದ ಪ್ರೇಕ್ಷಕರಲ್ಲಿ ಅಳಿದುಳಿದ ಕುತೂಹಲವೂ ಹೊರಟು ಹೋಗುತ್ತದೆ. ಆ ಪುಟದ ಬಗ್ಗೆ ಮೊದಲೇ ಸಂದೇಹ ವ್ಯಕ್ತಪಡಿಸುವ ಕತೆಗಾರ ಪುಟ ನಾಶ ಮಾಡಿದ ಮೇಲೆ ಆ ಪುಸ್ತಕವನ್ನು ಅಲ್ಲೇ ಎದ್ದು ಕಾಣುವಂತೆ ಇರಿಸುವುದು ತಾರ್ಕಿಕವಾಗಿ ನಂಬಲು ಅಸಾಧ್ಯ. ಇಂಥ ಒಂದಷ್ಟು ಲಾಜಿಕ್ ರಹಿತ ವಿಚಾರಗಳನ್ನು ಹೊರತು ಪಡಿಸಿದರೆ ಚಿತ್ರದ ಮೇಕಿಂಗ್ ಅನ್ನು ಮೆಚ್ಚಿಕೊಳ್ಳಬಹುದು.


ತಾರಾಗಣ: ಜೆಕೆ, ನವೀನ್ ಕೃಷ್ಣ
ನಿರ್ದೇಶಕ, ನಿರ್ಮಾಪಕ: ದಯಾಳ್ ಪದ್ಮನಾಭನ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News