"ಮೋದೀಜಿ... ರಫೇಲ್ ಬಗ್ಗೆ ಕೇವಲ 15 ನಿಮಿಷ ಚರ್ಚೆಗೆ ಬರುತ್ತೀರಾ ?"

Update: 2018-11-18 03:58 GMT

ಅಂಬಿಕಾಪುರ, ನ. 18: "ಮೋದೀಜಿ... ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಸರ್ಕಾರದ ಜತೆ ಮಾಡಿಕೊಂಡ ಒಪ್ಪಂದದ ವಿವರಗಳ ಬಗ್ಗೆ, ಧೈರ್ಯವಿದ್ದರೆ ಕೇವಲ 15 ನಿಮಿಷಗಳ ಚರ್ಚೆಗೆ ಬನ್ನಿ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.

ಈ ಒಪ್ಪಂದದಲ್ಲಿ ಆಗಿರುವ ಅವ್ಯವಹಾರ ಕುರಿತು ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಮೋದಿಯವರು ಇಲ್ಲ ಎಂದು ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಆರೋಪ ಮಾಡಿದರು.

"ಮೋದಿಯವರು ಯಾವುದೇ ವೇದಿಕೆಯಲ್ಲಿ, ಯಾವುದೇ ಸಮಯದಲ್ಲಿ ರಫೇಲ್ ಅವ್ಯವಹಾರದ ಬಗ್ಗೆ ನನ್ನ ಜತೆ ಕೇವಲ 15 ನಿಮಿಷಗಳ ಚರ್ಚೆಗೆ ಬರಲಿ ಎಂಬ ಸವಾಲು ಹಾಕುತ್ತಿದ್ದೇನೆ. ನಾನು ಅನಿಲ್ ಅಂಬಾನಿ, ಎಚ್‌ಎಎಲ್, ಫ್ರಾನ್ಸ್ ಅಧ್ಯಕ್ಷ ಹೇಳಿಕೆ ಹಾಗೂ ಯುದ್ಧವಿಮಾನಗಳ ಬೆಲೆ ನಿಗದಿ ಬಗ್ಗೆ ಮಾತನಾಡುತ್ತೇನೆ. ಈ ಒಪ್ಪಂದ ಸ್ವತಃ ಪ್ರಧಾನಿಯ ನಿರ್ಧಾರ ಎಂದು ರಕ್ಷಣಾ ಸಚಿವರು ಹೇಳಿದ ಬಗ್ಗೆ ನಾನು ವಿವರಿಸುತ್ತೇನೆ. ಪ್ರಧಾನಿ ವಿಧಿವಿಧಾನಗಳನ್ನು ಅನುಸರಿಸಿಲ್ಲ. ಮಧ್ಯರಾತ್ರಿ ಬಳಿಕ 2 ಗಂಟೆಗೆ ಸಿಬಿಐ ನಿರ್ದೇಶಕರನ್ನು ಪದಚ್ಯುತಗೊಳಿಸಲಾಗಿದೆ. ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಲಾರರು" ಎಂದು ರಾಹುಲ್ ಹೇಳಿದ್ದಾರೆ.

ಮೋದಿಯವರ ನೋಟು ರದ್ದತಿ ನಡೆ, ಅವರ ಕೆಲ ಉದ್ಯಮಿ ಸ್ನೇಹಿತರಿಗಷ್ಟೇ ಲಾಭ ತಂದಿದೆ ಎಂದು ರಾಹುಲ್ ಆರೋಪಿಸಿದರು. ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ 15 ವರ್ಷದಿಂದ ಅಧಿಕಾರದಲ್ಲಿದ್ದರೂ, ಉದ್ಯೋಗಾವಕಾಶ ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

"ರಮಣ್‌ಸಿಂಗ್ ಸಿಎಂ ಆಗಿ 15 ವರ್ಷಗಳಾಗಿವೆ. ಮೋದಿ ಪ್ರಧಾನಿಯಾಗಿ ನಾಲ್ಕೂವರೆ ವರ್ಷ ಕಳೆದಿದೆ. ಉದ್ಯೋಗ ಸೃಷ್ಟಿ ವಿಚಾರದಲ್ಲಿ ಜನತೆಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಇಬ್ಬರೂ ವಿಫಲರಾಗಿದ್ದಾರೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News