ರಾಯಚೂರಿನಲ್ಲಿ ಮಸೀದಿ ಧ್ವಂಸಗೊಂಡಾಗ ದೇಗುಲ ಪತ್ತೆಯಾಗಿದ್ದು ಹೌದೇ?

Update: 2018-11-18 05:53 GMT

@ಉಮಾಗಾರ್ಗಿ ಎಂಬ ಟ್ವಿಟರ್ ಹ್ಯಾಂಡಲ್‍ನಿಂದ ಇತ್ತೀಚೆಗೆ ಒಂದು ದೇವಸ್ಥಾನ ಚಿತ್ರದೊಂದಿಗೆ "ಕರ್ನಾಟಕದ ರಾಯಚೂರಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯೊಂದನ್ನು ಕೆಡವಿದಾಗ ಈ ದೇವಸ್ಥಾನ ಪತ್ತೆಯಾಗಿದೆ. ನಾವು ಎಲ್ಲ ಮಸೀದಿಗಳನ್ನು ಧ್ವಂಸ ಮಾಡಬೇಕಾಗಿದೆ" ಎಂಬ ಟ್ವೀಟ್ ಮಾಡಲಾಗಿತ್ತು.

ಹಲವು ಮಂದಿ ಈ ಚಿತ್ರಕ್ಕೆ ಇಂಥದ್ದೇ ವಿವರಣೆಗಳನ್ನು ಬರೆದು ಟ್ವೀಟ್ ಮಾಡಿದರು. ಫೇಸ್‍ಬುಕ್‍ನಲ್ಲಿ ಈ ಚಿತ್ರ ಪೋಸ್ಟ್ ಮಾಡಿದವರಲ್ಲಿ ರಮಣಿ ಪರಶುರಾಮನ್ ಮೊದಲಿಗರು.

ಸತ್ಯ ಏನು?

ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ, ಮಸೀದಿ ಕೆಡವಿದಾಗ ಕಂಡುಬಂದಿದೆ ಎನ್ನಲಾದ ದೇಗುಲದ ಚಿತ್ರ ವಾಸ್ತವವಾಗಿ ಒಬ್ಬ ಕಲಾಕಾರನ ಡಿಜಿಟಲ್ ಸೃಷ್ಟಿ. ಈ ಚಿತ್ರದ ಕೆಳತುದಿಯ ಬಲಭಾಗದಲ್ಲಿ "ಚಂದ್ರ ಕಲರಿಸ್ಟ್" ಎಂಬ ಲೋಗೊ ಕಾಣಬಹುದು. ಈ ಚಿತ್ರ ಕಲಾಕಾರನ ಸೃಷ್ಟಿ ಎನ್ನುವ ಸುಳಿವನ್ನು ಇದು ನೀಡುತ್ತದೆ.  ಕುತೂಹಲದಿಂದ ಇದರ ಮೂಲ ಹುಡುಕಿದಾಗ, ಚಂದ್ರ ಕಲರಿಸ್ಟ್ ಎಂಬ ಹೆಸರಿನ ಫೇಸ್‍ಬುಕ್ ಖಾತೆ ಈ ಚಿತ್ರವನ್ನು 2016ರ ಮೇ 8ರಂದು ಪೋಸ್ಟ್ ಮಾಡಿರುವುದು ತಿಳಿದುಬಂತು. ಈ ಪೋಸ್ಟ್ ಯಾವ ಸ್ಥಳಕ್ಕೆ ಸಂಬಂಧಿಸಿದ್ದು ಎಂದು ಕೇಳಿ ಬರೆದ ಕಾಮೆಂಟ್‍ಗೆ, "ಇದು ಡಿಜಿಟಲ್ ಸೃಷ್ಟಿ" ಎಂದು ಕಲಾಕಾರ ಉತ್ತರ ನೀಡಿದ್ದಾರೆ.

ಗೂಗಲ್‍ನಲ್ಲಿ ಈ ಚಿತ್ರದ ಮೂಲ ಹುಡುಕಿದಾಗ, ಈ ಚಿತ್ರವನ್ನು 2016ರ ಏಪ್ರಿಲ್ 12ರಂದು ಮಿಕಿಯಾನ್‍ಬಾವೊ ಎಂಬುವವರು ಕ್ಲಿಕ್ಕಿಸಿದ್ದು, ಇದರ ಆಧಾರದಲ್ಲಿ ಬಹುಶಃ ಚಂದ್ರ ಅವರು ಈ ಡಿಜಿಟಲ್ ಕಲಾಕೃತಿಯನ್ನು ಸೃಷ್ಟಿಸಿರಬೇಕು ಎಂದು ಅಂದಾಜಿಸಬಹುದು. ಸೂಕ್ಷ್ಮವಾಗಿ ಎರಡೂ ಚಿತ್ರಗಳನ್ನು ಪರಿಶೀಲಿಸಿದಾಗ, ಚಂದ್ರ ಸೃಷ್ಟಿಸಿದ ಕಲಾಕೃತಿಯಲ್ಲಿ ಕಂಡುಬರುವ ಹಲವು ಲಕ್ಷಣಗಳು, ಈ ಕೆಳಗಿನ ಮೂಲ ಚಿತ್ರದಲ್ಲೂ ಕಾಣಸಿಗುತ್ತವೆ.

ಅಮೆರಿಕದ ಫೋಟೊ ದಾಸ್ತಾನು ಏಜೆನ್ಸಿ "ಷಟರ್‍ಸ್ಟಾಕ್" ಪ್ರಕಾರ, ಈ ಫೋಟೊ ಚೀನಾದ ಹೆನನ್ ನಗರದ ಲುಯಾಂಗ್ ಎಂಬಲ್ಲಿರುವ ಲಾಂಗ್‍ಮನ್ ಗ್ರೊಟ್ಟೋಸ್- ಫೆಂಗ್‍ಕ್ಸಿಯಾಂಗ್ ಟೆಂಪಲ್ ಸ್ಟೋನ್ ಬುದ್ಧಾಸ್‍ನದ್ದು.

ಆದರೆ ಇದೀಗ ಈ ಚಿತ್ರವನ್ನು ಕರ್ನಾಟಕದ ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ಕಂಡುಬಂದ ದೇಗುಲದ ಪಳೆಯುಳಿವಿಕೆ ಎಂದು ಬಿಂಬಿಸಲಾಗುತ್ತಿದೆ. ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇಗುಲ ಪತ್ತೆಯಾಗಿತ್ತೇ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

2016ರಿಂದಲೂ ಹರಿದಾಡುತ್ತಿದೆ

ಇಂಥ ಹಲವು ಚಿತ್ರಗಳು ಇಂಥದ್ದೇ ವರ್ಣನೆಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ 2016ರಿಂದಲೂ ಹರಿದಾಡುತ್ತಲೇ ಇದೆ.

ಸುಳ್ಳುಸುದ್ದಿಗಳನ್ನು ಹರಡುವ "ಪೋಸ್ಟ್‍ಕಾರ್ಡ್ ನ್ಯೂಸ್" ವೆಬ್‍ಸೈಟ್ ಆರಂಭಿಸಿದ ಮಹೇಶ್ ವಿಕ್ರಮ್ ಹೆಗಡೆ ಮತ್ತು ಕೆ.ಪಿ.ಗಣೇಶ್ ಎಂಬುವವರು, ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಕೆಡವಿದಾಗ ಒಂದು ದೇವಸ್ಥಾನ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದರು. ಟ್ವಿಟ್ಟರ್‍ನಲ್ಲಿ ಈ ಇಬ್ಬರನ್ನೂ ಪ್ರಧಾನಿ ನರೇಂದ್ರ ಮೋದಿ ಅನುಸರಿಸುತ್ತಿದ್ದಾರೆ.

'ಕಾಂಗ್ರೆಸ್‍ಮುಕ್ತಭಾರತ' ಎಂಬ ಟ್ವಿಟರ್ ಹ್ಯಾಂಡಲ್ ಕೂಡಾ 2016ರ ಏಪ್ರಿಲ್ 11ರಂದು ಇಂಥದ್ದೇ ಪ್ರತಿಪಾದನೆ ಮಾಡಿದ್ದು, ಇದು 1500 ಬಾರಿ ಮರುಟ್ವೀಟ್ ಆಗಿದೆ. ‘ಸ್ಟ್ರಗಲ್ ಫಾರ್ ಹಿಂದೂ ಎಕ್ಸಿಸ್ಟೆನ್ಸ್’ ಎಂಬ ವೆಬ್‍ಸೈಟ್ ಕೂಡಾ ಇಂಥದ್ದೇ ವಿವರಗಳನ್ನು ಒಳಗೊಂಡ ಲೇಖನ ಪ್ರಕಟಿಸಿದೆ.

2016ರಲ್ಲಿ ರಸ್ತೆ ಅಗಲೀಕರಣಕ್ಕೆ ಆದೇಶ ನೀಡಿದ್ದ ಜಿಲ್ಲಾಧಿಕಾರಿಯವನ್ನು ಆಲ್ಟ್‍ನ್ಯೂಸ್ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು: "ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಮಾಹಿತಿ ಸತ್ಯವಲ್ಲ. ರಾಯಚೂರಿನಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಲ ಪಾರಂಪರಿಕ ಕಟ್ಟಡಗಳನ್ನೂ ಕೆಡವಲಾಗಿದೆ. ಏಕ್ ಮಿನಾರ್ ಎಂಬ ಅತ್ಯಂತ ಹಳೆಯ ಕಟ್ಟಡ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಡವಲಾದ ಕಟ್ಟಡಗಳ ಪೈಕಿ ಒಂದು. ಇಂಥ ಹಳೆಯ ಕಟ್ಟಡಗಳಲ್ಲಿ ವೈವಿಧ್ಯಮಯ ಕೆತ್ತನೆಗಳಿರುತ್ತವೆ. ಆದ್ದರಿಂದ ಒಂದು ಸ್ತಂಭ ದೇವಸ್ಥಾನದ ಸ್ತಂಭದಂತಿದೆ ಎಂಬ ಏಕೈಕ ಕಾರಣದಿಂದ ಅಲ್ಲಿ ದೇವಸ್ಥಾನ ಇತ್ತು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕೆಲ ಗುಂಪುಗಳು ಇಂಥ ಪ್ರತಿಪಾದನೆ ಮಾಡಿವೆ. ಆದರೆ ಅದನ್ನು ಪ್ರಶ್ನಿಸಿದಾಗ, ಅವರು ಆ ಪ್ರತಿಪಾದನೆಯನ್ನು ಕೈಬಿಟ್ಟರು"

ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರ, ಕಲಾಕಾರರೊಬ್ಬರ ಡಿಜಿಟಲ್ ಸೃಷ್ಟಿಯಾಗಿದ್ದು, ಹಳೆಯ ವಾಸ್ತುಶಿಲ್ಪವೊಂದರ ತಪ್ಪು ವಿಶ್ಲೇಷಣೆಯ ಆಧಾರದಲ್ಲಿ 2016ರಿಂದಲೇ ಈ ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸತ್ಯಶೋಧನೆಗೆ ಹಲವು ಮಾಧ್ಯಮ ಸಂಸ್ಥೆಗಳು ಹೂಡಿಕೆ ಮಾಡಬೇಕಾದ ಅಗತ್ಯತೆಯನ್ನು ಕೂಡಾ ಇದು ತೋರಿಸುತ್ತದೆ. ದಾರಿತಪ್ಪಿಸುವ ಇಂಥ ಪ್ರತಿಪಾದನೆಗಳನ್ನು ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲಾಗುತ್ತಿದ್ದು, ಇಂಥ ಸುಳ್ಳು ಪ್ರತಿಪಾದನೆಗಳನ್ನು ವಿರೋಧಿಸಿ, ಜನರಿಗೆ ಸರಿಯಾದ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾಧ್ಯಮ ಸಂಸ್ಥೆಗಳು ಸಾಕಷ್ಟು ಕೆಲಸ ಮಾಡುತ್ತಿಲ್ಲ.

ಕೃಪೆ : altnews.in

Writer - ಜಿಗ್ನೇಶ್ ಪಟೇಲ್

contributor

Editor - ಜಿಗ್ನೇಶ್ ಪಟೇಲ್

contributor

Similar News