ಛತ್ತೀಸ್‌ಗಢದಲ್ಲಿ ಇವಿಎಂ ಅಕ್ರಮ ಎಂಬ ವೀಡಿಯೊ ನಕಲಿ: ಅಧಿಕಾರಿಗಳ ಹೇಳಿಕೆ

Update: 2018-11-19 16:03 GMT

ಹೊಸದಿಲ್ಲಿ, ನ.19: ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ವಿಧಾನಸಭೆ ಚುನಾವಣೆ ಪ್ರಯುಕ್ತ ನಡೆದ ಪ್ರಥಮ ಹಂತದ ಮತದಾನದ ಸಂದರ್ಭ ವಿದ್ಯುನ್ಮಾನ ಮತಯಂತ್ರ(ಇವಿಎಂ)ದಲ್ಲಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ವೀಡಿಯೊ ನಕಲಿ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾವು ಇವಿಎಂನಲ್ಲಿ ಪಕ್ಷದ ಚಿಹ್ನೆಯೊಂದಕ್ಕೆ ಸಂಬಂಧಿಸಿದ ಗುಂಡಿಯನ್ನು ಒತ್ತಿದಾಗ ವಿವಿಪ್ಯಾಟ್ ಯಂತ್ರದಲ್ಲಿ ಬೇರೊಂದು ಪಕ್ಷದ ಚಿಹ್ನೆಯನ್ನು ತೋರಿಸುತ್ತಿತ್ತು ಎಂದು ಕೆಲವರು ದೂರುತ್ತಿರುವುದು ವೀಡಿಯೊ ದೃಶ್ಯದ ಸಹಿತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ವೀಡಿಯೊ ಛತ್ತೀಸ್‌ಗಢಕ್ಕೆ ಸಂಬಂಧಿಸಿದ್ದಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ನವೆಂಬರ್ 12ರಂದು ನಡೆದ ಪ್ರಥಮ ಹಂತದ ಮತದಾನದ ಸಂದರ್ಭ ಪ್ಲಾಸ್ಟಿಕ್ ಶೀಟ್‌ಗಳನ್ನು ಹೊದಿಸಲಾಗಿದ್ದ ಚುನಾವಣಾ ಆಯೋಗದ ಚಿಹ್ನೆಯಿದ್ದ ಇವಿಎಂ ಯಂತ್ರಗಳನ್ನು ಬಳಸಲಾಗಿದೆ. ಆದರೆ ವೀಡಿಯೊದಲ್ಲಿ ತೋರಿಸಲಾಗಿರುವ ಇವಿಎಂ ಯಂತ್ರವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದು ಇದರ ಮೇಲೆ ಯಾವುದೇ ಚಿಹ್ನೆಯಿಲ್ಲ. ಅಲ್ಲದೆ ನಾವು ಗುಲಾಬಿ ಬಣ್ಣದ ಮತಪತ್ರವನ್ನು ಬಳಸಿದ್ದರೆ, ವೀಡಿಯೊದಲ್ಲಿ ಬಿಳಿ ಬಣ್ಣದ ಮತಪತ್ರವಿದೆ. ಛತ್ತೀಸ್‌ಗಢದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಗುರುತುಪತ್ರ ಹಳದಿ ಬಣ್ಣದಲ್ಲಿದ್ದರೆ, ವೀಡಿಯೊದಲ್ಲಿ ಸಿಬ್ಬಂದಿಗಳ ಗುರುತುಪತ್ರ ಬಿಳಿ ಬಣ್ಣದಲ್ಲಿದೆ. ನಾವು ಬಳಸಿರುವ ಮತದಾನ ಘಟಕ ಇಸಿಐಎಲ್ ಎಂ3ಬಿಯು ಆಗಿದ್ದರೆ ವೀಡಿಯೊದಲ್ಲಿ ಬೇರೆ ತೋರಿಸಲಾಗಿದೆ. ಅಲ್ಲದೆ ವೀಡಿಯೊದಲ್ಲಿ ಮತದಾರರು ಹಾಗೂ ಸಿಬ್ಬಂದಿ ಸ್ವೆಟರ್, ಜಾಕೆಟ್, ಉಣ್ಣೆಯ ಹ್ಯಾಟ್, ಮಫ್ಲರ್‌ಗಳನ್ನು ಧರಿಸಿದ್ದು ಬಹುಷಃ ಶೀತವಲಯದಲ್ಲಿ ನಡೆದಿರುವ ಮತದಾನದ ಚಿತ್ರ ಇದಾಗಿರಬೇಕು.

ಆದರೆ ಛತ್ತೀಸ್‌ಗಢದಲ್ಲಿ ನವೆಂಬರ್ 12ರಂದು ನಡೆದ ಮತದಾನದ ಸಂದರ್ಭ ಉಷ್ಣತೆ ಹೆಚ್ಚಿದ್ದು ಯಾರು ಕೂಡಾ ಸ್ವೆಟರ್, ಜಾಕೆಟ್ ಧರಿಸಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News