ಇದು ಕೃಷಿ ಮೇಳವೇ ಅಥವಾ ಯಂತ್ರ ಪ್ರದರ್ಶನವೇ?

Update: 2018-11-19 18:32 GMT

ಇದು ನನ್ನ ಮೊದಲನೇ ಕೃಷಿಮೇಳ, ನಾನು ಒಂದು ಕೃಷಿಕುಟುಂಬ ದಿಂದಲೇ ಬಂದವನಾದ್ದರಿಂದ ನನ್ನೊಳಗೆ ಕುತೂಹಲ ಇಮ್ಮಡಿ ಗೊಂಡಿತ್ತು. ಅಲ್ಲಿ ಹಾಗಿರಬಹುದು, ಹೀಗಿರಬಹುದು, ಅಲ್ಲಿ ಸುಮಾರು ಬಗೆಯ ತಳಿಗಳು ಮಾಹಿತಿ ನೀಡುವ, ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡುವ, ರಾಸಾಯನಿಕವನ್ನು ಬಳಸಿ ತನ್ನ ಭೂಮಿಯ ಫಲವತ್ತತೆಯನ್ನು ಕಳೆದುಕೊಂಡ ರೈತನಿಗೆ ರಾಸಾಯನಿಕವನ್ನು ಬಳಸದೆ ತನ್ನ ಭೂಮಿಯ ಫಲವತ್ತತೆಯನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ಹೇಳುವ, ಯಂತ್ರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು ಅಥವಾ ಬಳಸದೆಯೇ ಹೇಗೆ ಸುಸ್ಥಿರ ಕೃಷಿಬದುಕನ್ನು ಕಟ್ಟಿಕೊಳ್ಳುವುದು ಎಂಬುದನ್ನು ತಿಳಿಸುವ ವಿವಿಧ ಕೇಂದ್ರಗಳಿರಬಹುದು ಎಂದೆಲ್ಲ ಕಲ್ಪಿಸಿಕೊಂಡಿದ್ದೆ. ಆದರೆ ಬೆಂಗಳೂರಿನ ಜಿಕೆವಿಕೆ ಕೃಷಿ ಮೇಳದಲ್ಲಿ ಇದ್ದದ್ದು ನನ್ನ ಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಿದ್ದ ವಾತಾವರಣ. ಅಲ್ಲಿ ಏನಿದ್ದರೂ ಬರೀ ಯಂತ್ರಗಳದ್ದೇ ಗದ್ದಲ, ಕೃಷಿಮೇಳ ಅಂದರೆ ಇದೇನಾ? ಇಲ್ಲ ಇದು ಬರೀ ವಸ್ತು ಪ್ರದರ್ಶನವಷ್ಟೆ. ಇದು ಕೃಷಿಮೇಳವಲ್ಲ ಬದಲಾಗಿ ಬಂಡವಾಳಶಾಹಿಗಳು ತಾವು ಉತ್ಪಾದಿಸಿದ ಯಂತ್ರೋಪಕರಣಗಳತ್ತ ಎಲ್ಲರ ಗಮನ ಸೆಳೆಯಲು ಜಿಕೆವಿಕೆಯ ಸಂಯೋಜನೆಯೊಂದಿಗೆ ನಿರ್ಮಿಸಿಕೊಂಡ ಒಂದು ಮಾರುಕಟ್ಟೆಯಷ್ಟೆ.

ಈ ಕಾರ್ಯಕ್ರಮಕ್ಕೆ ಜನ ಸರಬರಾಜು ಮಾಡುವ ಕೆಲಸವನ್ನು ಕೃಷಿಇಲಾಖೆಯವರಿಗೆ ವಹಿಸಲಾಗಿತ್ತು, ಕೃಷಿ ಇಲಾಖೆಯವರೋ ಬಂಡವಾಳಶಾಹಿಗಳ ಕೆಲಸವನ್ನು ದೇವರಕೆಲಸವೆಂಬಂತೆ ತಿಳಿದು ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರಾಜ್ಯದ ವಿವಿಧ ಕಡೆಗಳಿಂದ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಬುಕ್ ಮಾಡಿ ರೈತರನ್ನು ಅದಕ್ಕೆ ತುಂಬಿಸಿ ಜಿಕೆವಿಕೆ ಯಂತ್ರಪ್ರದರ್ಶನದ ಮೈದಾನದಲ್ಲಿ ಇಳಿಸುವಲ್ಲಿ ಯಶಸ್ವಿಯಾಯಿತು.

ಈ ಬಾರಿಯ ಕೃಷಿಮೇಳವನ್ನು ಸಂಪೂರ್ಣವಾಗಿ ಯಂತ್ರಗಳೇ ಆವರಿಸಿಕೊಂಡಿದ್ದವು. ಎಲ್ಲಿ ನೋಡಿದರಲ್ಲಿ ಯಂತ್ರಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಸದ್ದು ಮಾಡುತಿದ್ದವು. ಕೃಷಿ ಇಲಾಖೆಯ ದೊಡ್ಡ ಮನಸ್ಸಿನ ಕಾರಣಕ್ಕೆ ಅಲ್ಲಿಗೆ ಆಗಮಿಸಿದ್ದ ರೈತರು ಈ ಯಂತ್ರಗಳನ್ನು ಕಂಡು ಬಾಯಿಗೆ ಕೈ ಇಡುತಿದ್ದರು. ಇವುಗಳನ್ನೆಲ್ಲ ನೋಡಿ ಮುಂದಡಿ ಇಡಬೇಕಾದರೆ ಇಬ್ಬರು ರೈತರು ಈ ಯಂತ್ರಗಳನ್ನು ನೋಡಿ ಏನೋ ಮಾತನಾಡುತ್ತಿದ್ದರು ಅವರು ಏನು ಮಾತನಾಡುತ್ತಿರಬಹುದು ಎಂಬ ಕುತೂಹಲದಿಂದ ನನ್ನ ಕಿವಿಗಳನ್ನು ಅವರತ್ತ ಹೊರಳಿಸಿದೆ. ಅವರಲ್ಲಿ ಒಬ್ಬ ರೈತ ‘‘ಅಯ್ಯೋ ಈ ಯಂತ್ರಗಳನ್ನೆಲ್ಲ ನಾವು ಯಾವಾಗ ಕೊಂಡುಕೊಳ್ಳುವುದು, ಇಂತಹ ಯಂತ್ರಗಳನ್ನು ಬಳಸಿದರಷ್ಟೇ ಹೆಚ್ಚು ಇಳುವರಿ ಬರೋದು’’ ಎಂದ.

ಇದಕ್ಕೆ ಮತ್ತೊಬ್ಬ ರೈತ ‘‘ಹಾಗೇನಿಲ್ವೊ ಒಂದೇ ಏಟಿಗೆ ಎಲ್ಲ ಹಣ ಕೊಡಬೇಕಂತೇನು ಇಲ್ಲ, ಅವ್ರೆ ಸಾಲ ನೀಡ್ತಾರೆ, ನಿಧಾನವಾಗಿ ಸಾಲ ಕಟ್ಟಿದ್ರೆ ಆಯ್ತು’’ ಅಂದ. ಇಷ್ಟೆ ಇಲ್ಲಿಗೆ ಕೃಷಿಮೇಳವನ್ನು ಆಯೋಜಿಸಿದ ಬಂಡವಾಳಶಾಹಿಗಳ ಉದ್ದೇಶ ನೆರವೇರಿದಂತೆಯೇ. ಇದಕ್ಕೆ ತಕ್ಕಂತೆ ಕೃಷಿ ಸಂಶೋಧನಾ ವಿದ್ಯಾರ್ಥಿಗಳು ಕಂಡುಹಿಡಿಯುತ್ತಿರುವ ಬಗೆ ಬಗೆಯ ಕೃಷಿಯಂತ್ರಗಳು ಭೂಮಿಯನ್ನು ಮತ್ತಷ್ಟು ಬರಡುಮಾಡುವಂತಹ, ರೈತನನ್ನು ಮತ್ತಷ್ಟು ಕುಗ್ಗಿಸುವಂತಹ ಕಾರ್ಯವನ್ನು ಮಾಡುತ್ತಿವೆ. ಇದಕ್ಕೆಲ್ಲ ಕಾರಣ ಕೃಷಿ ಸಂಶೋಧನಾ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿ ಎಂಬ ಪದವನ್ನು ಅರ್ಥಮಾಡಿಕೊಂಡ ರೀತಿ ಮತ್ತು ತನ್ನ ವಿದ್ಯಾರ್ಥಿಗಳಿಗೆ ಅದನ್ನು ಅರ್ಥೈಸುತ್ತಿರುವ ರೀತಿ. ಕೃಷಿಯನ್ನು ಅಭಿವೃದ್ಧಿ ಮಾಡುವುದೆಂದರೆ ಯಂತ್ರಗಳನ್ನು ಕಂಡು ಹಿಡಿಯುವುದಷ್ಟೇನಾ? ಒಬ್ಬ ರೈತ ಕೃಷಿಯಲ್ಲಿ ಯಂತ್ರವನ್ನು ಬಳಸುತ್ತಿದ್ದಾನೆ ಎಂದರೆ ಆತ ಅಭಿವೃದ್ಧಿ ಹೊಂದಿದ್ದಾನೆ ಎಂದು ಅರ್ಥವೇ?

ಇದಕ್ಕೆ ಉದಾಹರಣೆ ಎಂಬಂತೆ ಈ ಸಲದ ಕೃಷಿಮೇಳದಲ್ಲಿ ರಾಜ್ಯದ ಒಂದು ಸಂಶೋಧನಾ ವಿಶ್ವವಿದ್ಯಾನಿಲಯ ತಯಾರಿಸಿದ ಮದ್ದು ಸಿಂಪಡಿಸುವ ಡ್ರೋನ್ ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದಕ್ಕೆ ವ್ಯಯಿಸಿದ ಹಣ ಬರೋಬ್ಬರಿ 12 ಲಕ್ಷ ರೂಪಾಯಿಗಳು. ಇದು ಎಲ್ಲರ ಗಮನ ಸೆಳೆದದ್ದು ಸುಳ್ಳಲ್ಲ. ಆದರೆ ಪ್ರಶ್ನೆ ಇರುವುದು ಇದು ರೈತರಿಗೆ ಹೇಗೆ ಸಹಾಯ ವಾಗಬಹುದು? ಒಂದು ವೇಳೆ ಸಹಾಯವಾದರೂ ಯಾವ ವರ್ಗದ ರೈತನಿಗೆ ಸಹಾಯವಾಗಬಹುದು? ಉತ್ತರ ಸ್ಪಷ್ಟ. ಇದರಿಂದ ಸಾಮಾನ್ಯವರ್ಗದ ರೈತನಿಗಂತೂ ಯಾವುದೇ ಸಹಾಯವೂ ಆಗದು. ಯಾರಿಗೆ ಸಹಾಯವಾಗುತ್ತದೆ ಎಂಬುದರ ಚರ್ಚೆ ಅಲ್ಲಿರಲಿ ಅದರಿಂದ ಆಗುವ ಅನಾಹುತಗಳನ್ನಾದರು ತಿಳಿದುಕೊಳ್ಳಲು ಪ್ರಯತ್ನಿಸಬೇಕಲ್ಲವೆ? ಈ ಹಿಂದೆ ಕರಾವಳಿ ಭಾಗದಲ್ಲಿ ಗೇರು ಕೃಷಿಗೆ ಎಂಡೋಸಲ್ಪಾನ್‌ಮದ್ದನ್ನು ಹೆಲಿಕ್ಯಾಪ್ಟರ್‌ನ ಮೂಲಕ ಸಿಂಪಡಿಲಾಯಿತು. ಎಲ್ಲರೂ ಇದನ್ನೇ ಅಭಿವೃದ್ಧಿ ಎಂದು ನಂಬಿದ್ದರು. ಆದರೆ ಇದರ ಪರಿಣಾಮ ಎಷ್ಟು ಭೀಕರವಾಗಿತ್ತೆಂಬುದನ್ನು ವಿವರಿಸುವ ಅಗತ್ಯವಿಲ್ಲ.

ಈಗಲೂ ಅಲ್ಲಿನ ಜನರು ಆ ನರಕವನ್ನು ಅನುಭವಿಸುತ್ತಿದ್ದಾರೆ. ಈಗ ಹೇಳಿ ಈ ಡ್ರೋನ್‌ಅನ್ನು ಅಭಿವೃದ್ಧಿಯ ಸಂಕೇತವೆಂದು ಭಾವಿಸಬಹುದೇ? ಇದರಿಂದ ಯಾವುದೇ ಈ ತರಹದ ದುಷ್ಪ್ಪರಿಣಾಮಗಳು ಉಂಟಾಗಲಾರದೆಂದು ಆ ಸಂಶೋಧನಾ ವಿಶ್ವವಿದ್ಯಾನಿಲಯಗಳು ಭರವಸೆ ನೀಡುವುದೇ? ಇಲ್ಲ ಯಂತ್ರಗಳನ್ನು ಸೃಷ್ಟಿಸುವುದಷ್ಟೇ ಇವುಗಳ ಕೆಲಸವೇ? ಈಗೀಗ ಈ ಸಂಶೋಧನಾ ವಿಶ್ವವಿದ್ಯಾನಿಲಯಗಳೆಲ್ಲ ಬಂಡವಾಳಶಾಹಿಗಳ ಪರವಾಗಿ ಹೊಸ ಹೊಸ ಯಂತ್ರಗಳನ್ನು ಸಂಶೋಧಿಸುವಲ್ಲಿ ಮಗ್ನವಾಗುತ್ತಿವೆ. ಹೀಗಿರುವಾಗ ಇವೆಲ್ಲ ರೈತರಪರವಾದ ಸಂಶೋಧನೆಗಳಾಗಲು ಹೇಗೆ ಸಾಧ್ಯ? ಯಂತ್ರಗಳ ಬಗ್ಗೆ ವ್ಯಯಿಸುವ ಸಮಯದ ಅರ್ಧಭಾಗವನ್ನು ರೈತನಿಗಾಗಿ ಮೀಸಲಿಡುತ್ತಿದ್ದರೆ ಕೃಷಿ ಸಂಶೋಧನಾ ಸಂಸ್ಥೆಗಳಿಗೆ ರೈತನ ಜೀವನ ಮಟ್ಟವನ್ನು ಸುಧಾರಿಸಬಹುದಿತ್ತು.
ಇಂತಹ ಕೃಷಿಮೇಳಗಳಿಂದ ಸಾಧ್ಯತೆಗಳಂತೂ ಸಾಕಷ್ಟಿವೆ. ಆದರೆ ಆಯೋಜಕರು ಅದರತ್ತ ಅಷ್ಟಾಗಿ ಗಮನ ಹರಿಸಿದಂತಿಲ್ಲ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಆತನಿಗೆ ಧೈರ್ಯತುಂಬುವ ಕಾರ್ಯವನ್ನು ಪ್ರಾಮಾಣಿಕವಾಗಿ ನಡೆಸಬಹುದಿತ್ತು. ಆದರೆ ಇಲ್ಲಿ ಅದಾಗಲಿಲ್ಲ.

Writer - ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Editor - ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Similar News