ಗಜ ಚಂಡಮಾರುತ: ಮೂಢನಂಬಿಕೆಯಿಂದ ಪ್ರಾಣ ಕಳೆದುಕೊಂಡ ಬಾಲಕಿ

Update: 2018-11-20 15:32 GMT

ತಂಜಾವೂರು,ನ.20: ಗಜ ಚಂಡಮಾರುತ ಅಪ್ಪಳಿಸಿದ ಸಮಯದಲ್ಲೇ ಮೊದಲ ಬಾರಿ ಋತುಮತಿಯಾಗಿ ಮನೆಯ ಹೊರಗೆ ಪ್ರತ್ಯೇಕ ಶೆಡ್‌ನಲ್ಲಿ ಮಲಗಿಸಲ್ಪಟ್ಟಿದ್ದ ಹನ್ನೆರಡರ ಹರೆಯದ ಬಾಲಕಿಯ ಮೇಲೆ ಶೆಡ್ ಕುಸಿದುಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ವರದಿಯಾಗಿದೆ. ಗಜ ಚಂಡಮಾರುತ ಅಪ್ಪಳಿಸಲಿದೆ. ಹಾಗಾಗಿ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಆದರೆ ಹಳೆ ಸಂಪ್ರದಾಯಕ್ಕೆ ಕಟ್ಟುಬಿದ್ದ ವಿಜಯಾ ಎಂಬ ಬಾಲಕಿಯ ಹೆತ್ತವರು ಆಕೆಯನ್ನು ಮನೆಯಿಂದ ಹೊರಗಿರುವ ದನದ ಹಟ್ಟಿಯಲ್ಲಿ ಮಲಗುವಂತೆ ಸೂಚಿಸಿದ್ದರು. ರಾತ್ರಿ ವೇಳೆ ಗಜ ಚಂಡಮಾರುತ ಅಪ್ಪಳಿಸಿದಾಗ ಹಟ್ಟಿಯ ಸಮೀಪವಿದ್ದ ತೆಂಗಿನ ಮರ ಬುಡಸಮೇತ ಹಟ್ಟಿಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಒಳಗೆ ಮಲಗಿದ್ದ ವಿಜಯ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ಜೊತೆ ಮಲಗಿದ್ದ ಆಕೆಯ ತಾಯಿಗೂ ಗಾಯಗಳಾಗಿದ್ದು ಆಕೆಯನ್ನು ಪುದುಕೋಟೈ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಋತುಮತಿಯಾದ ಹೆಣ್ಮಕ್ಕಳನ್ನು ಮನೆಯಿಂದ ಹೊರಗೆ ಹಟ್ಟಿಯಲ್ಲಿ ಇರುವಂತೆ ಸೂಚಿಸುವುದು ಕೆಲವು ಸಮುದಾಯಗಳಲ್ಲಿರುವ ಸಂಪ್ರದಾಯವಾಗಿದೆ. ಈ ಹಟ್ಟಿಯಲ್ಲಿ ಇಂತಿಷ್ಟು ದಿನಗಳನ್ನು ಕಳೆದ ನಂತರ ಅವರು ಮರಳಿ ಮನೆ ಸೇರಬಹುದಾಗಿದೆ. ಸದ್ಯ ಈ ಪ್ರಕರಣದಲ್ಲೂ ಅದೇ ನಡೆದಿರುವುದು ತಿಳಿದುಬಂದಿದೆ ಎಂದು ಪುದುಕೋಟೈ ಡಿಎಸ್‌ಪಿ ಗಣೇಶಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವೇರ್ ಇಂಡಿಯಾ ಎನ್‌ಜಿಒದ ಮುಖ್ಯಸ್ಥೆ ಕಾವ್ಯ ಮೆನನ್, ವಿಜಯಾಳ ಸಾವು ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ದೌರ್ಜನ್ಯದ ಫಲವಾಗಿದೆ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News