ಪದಚ್ಯುತಗೊಂಡ ಪಾನಮತ್ತ ಪೈಲಟ್ ಈಗ ಕಾರ್ಯನಿರ್ವಾಹಕ ನಿರ್ದೇಶಕ!

Update: 2018-11-21 04:46 GMT

ಹೊಸದಿಲ್ಲಿ, ನ.21 ಮದ್ಯಪಾನ ಮಾಡಿ ವಿಮಾನ ಚಾಲನೆ ಮಾಡಿದ ಆರೋಪದಲ್ಲಿ ಪದಚ್ಯುತಗೊಂಡಿದ್ದ ಏರ್‌ ಇಂಡಿಯಾದ ಹಿರಿಯ ಪೈಲಟ್ ಕ್ಯಾಪ್ಟನ್ ಅರವಿಂದ್ ಕಥಪಾಲಿಯಾ ಇದೀಗ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮರು ನಿಯೋಜನೆಗೊಂಡಿದ್ದಾರೆ.

ನಾಗರಿಕ ವಿಮಾನಯಾನ ಸೇವೆಗಳ ಮಹಾನಿರ್ದೇಶಕರು ನವೆಂಬರ್ 13ರಂದು ಹೊರಡಿಸಿದ ಆದೇಶದ ಅನ್ವಯ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಕಥಪಾಲಿಯಾ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾಗಿದ್ದರು. ನವೆಂಬರ್ 11ರಂದು ದಿಲ್ಲಿ- ಲಂಡನ್ ವಿಮಾನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಮದ್ಯಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಮಧ್ಯಾಹ್ನ 1:30ಕ್ಕೆ ನಡೆಸಿದ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ 20 ನಿಮಿಷಗಳ ಬಳಿಕ ನಡೆಸಿದ ಪರೀಕ್ಷೆಯಲ್ಲೂ ಅದೇ ಫಲಿತಾಂಶ ಬಂದಿತ್ತು.

ತಕ್ಷಣ ಅವರನ್ನು ಕಾರ್ಯಾಚರಣೆ ವಿಭಾಗದ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅಂತೆಯೇ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಡಿಜಿಸಿಎ ನಿದೇರ್ಶನ ನೀಡಿದ್ದರು. "ಕಥಪಾಲಿಯಾ ಅವರನ್ನು ನಿರ್ದೇಶಕ ಹುದ್ದೆಯಿಂದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಹಿಂಭಡ್ತಿ ನೀಡಿರುವ ಬಗ್ಗೆ ಆಂತರಿಕ ಆದೇಶ ಬಂದಿಲ್ಲ. ಆದರೆ ಡಿಜಿಸಿಎಯಿಂದ ಅಮಾನತು ಆದೇಶ ಬಂದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಉನ್ನತ ಮೂಲಗಳು ಹೇಳಿವೆ.

"ಕಥಪಾಲಿಯಾ ಅವರನ್ನು ಆಡಳಿತ ಮಂಡಳಿಯಿಂದ ಕಿತ್ತುಹಾಕಿರುವುದು ಆಡಳಿತಾತ್ಮಕ ಆದೇಶ. ಕರ್ತವ್ಯದಲ್ಲಿದ್ದಾಗ ದುರ್ನಡತೆ ಪ್ರದರ್ಶಿಸಿದ್ದಕ್ಕಾಗಿ ಏರ್ ಇಂಡಿಯಾದ ಆಂತರಿಕ ಶಿಸ್ತು ವಿಚಾರಣಾ ಸಮಿತಿಯ ವರದಿ ಆಧಾರದಲ್ಲಿ ಮತ್ತು ಡಿಜಿಸಿಎ ಅವರ ಲೈಸೆ ನ್ಸನ್ನು ಮೂರು ವರ್ಷಗಳಿಗೆ ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ" ಎಂದು ವಿಮಾನಯಾನ ತಜ್ಞ ವಿಪುಲ್ ಸಕ್ಸೇನಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News