ಅಮೃತಸರ ಸ್ಫೋಟ ಪ್ರಕರಣ: ಓರ್ವ ಆರೋಪಿಯ ಬಂಧನ

Update: 2018-11-21 16:17 GMT

ಅಮೃತಸರ, ನ.21: ಅಮೃತಸರದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ . ಈ ಮಧ್ಯೆ ಸ್ಫೋಟದಲ್ಲಿ ಪಾಕಿಸ್ತಾನದ ಐಎಸ್‌ಐ ಕೈವಾಡವಿರುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಆರೋಪಿಸಿದ್ದಾರೆ.

  ಬಂಧಿತ ಆರೋಪಿಯನ್ನು 26 ವರ್ಷದ ಬಿಕ್ರಮ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು ದುಷ್ಕೃತ್ಯಕ್ಕೆ ಬಳಸಲಾಗಿದ್ದ ಬೈಕನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮದವರಿಗೆ ವಿವರಿಸಿದ ಅಮರೀಂದರ್ ಸಿಂಗ್, ರಾಜ್ಯದಲ್ಲಿ ಅಶಾಂತಿಯ ವಾತಾವರಣ ಮೂಡಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಕೃತ್ಯದಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬ ಆರೋಪಿಯನ್ನೂ ಗುರುತಿಸಲಾಗಿದ್ದು ಆತನನ್ನು ಬಂಧಿಸಲು ಪ್ರಯತ್ನ ಮುಂದುವರಿದಿದೆ ಎಂದವರು ತಿಳಿಸಿದ್ದಾರೆ.

 ಇದೊಂದು ಭಯೋತ್ಪಾದಕ ಕೃತ್ಯವಾಗಿದ್ದು ಈ ಘಟನೆಗೆ ಧಾರ್ಮಿಕ ಹಿನ್ನೆಲೆಯಿಲ್ಲ ಎಂದಿರುವ ಸಿಂಗ್, ಭದ್ರತಾ ಪಡೆಗಳ ಸಕಾಲಿಕ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಉಗ್ರರಿಗಿಂತ ನಮ್ಮ ಭದ್ರತಾ ಪಡೆಗಳು ಯಾವಾಗಲೂ ಒಂದು ಹೆಜ್ಜೆ ಮುಂದಿವೆ. ರಾಜ್ಯದಲ್ಲಿ ಅಶಾಂತಿ ಹುಟ್ಟಿಸಲು ನಡೆಸಿದ್ದ 17 ಪ್ರಯತ್ನಗಳನ್ನು ವಿಫಲಗೊಳಿಸಿದ್ದು 81 ಮಂದಿಯನ್ನು ಬಂಧಿಸಲಾಗಿದೆ. 77 ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದ ಅವರು, ಅಮೃತಸರ ದಾಳಿ ಪ್ರಕರಣದಲ್ಲಿ ಬಳಸಲಾದ ಗ್ರೆನೇಡ್‌ನ ಚಿತ್ರವನ್ನು ಪ್ರದರ್ಶಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದಕರು ಬಳಸುವ ಗ್ರೆನೇಡ್ ಇದಾಗಿದ್ದು ಪಾಕಿಸ್ತಾನದ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದೆ ಎಂದು ಅಮರೀಂದರ್ ಸಿಂಗ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News