ನಗ್ರೋಟ ಭಯೋತ್ಪಾದಕ ದಾಳಿ: ಅಸ್ಗರ್ ಸಹಿತ 13 ಮಂದಿಯ ವಿರುದ್ಧ ಆರೋಪಪಟ್ಟಿ

Update: 2018-11-21 16:19 GMT

ಹೊಸದಿಲ್ಲಿ, ನ.21: 2016ರ ನಗ್ರೋಟ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪಾಕಿಸ್ತಾನ ಮೂಲದ ಜೈಶೆ ಮುಹಮ್ಮದ್ ಸಂಘಟನೆಯ ಉಪಾಧ್ಯಕ್ಷ ಅಬ್ದುಲ್ ರವೂಫ್ ಅಸ್ಗರ್ ಸಹಿತ 13 ಮಂದಿಯ ವಿರುದ್ಧ ಜಮ್ಮುವಿನಲ್ಲಿ ಆರೋಪಪಟ್ಟಿ ದಾಖಲಿಸಿದೆ.

ಜೆಇಎಂ ಸಂಘಟನೆಗೆ ಸೇರಿದ ಉಗ್ರರಾದ ಮುಹಮ್ಮದ್ ಆಶಿಕ್ ಬಾಬ, ಸೈಯದ್ ಮುನೀರುಲ್ ಹಸನ್ ಖಾದ್ರಿ, ತಾರಿಖ್ ಅಹ್ಮದ್ ದಾರ್ ಮತ್ತು ಅಶ್ರಫ್ ಹಮೀದ್ ಖಾಂಡೆ , ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕ್ ಮೂಲದ ಮೂವರು ಉಗ್ರರನ್ನು ಜಮ್ಮುವಿನ ಸಾಂಬ-ಕಥುವಾ ಪ್ರದೇಶದ ಅಂತಾರಾಷ್ಟ್ರೀಯ ಗಡಿಭಾಗದಿಂದ ಜಮ್ಮುವಿನ ಹೋಟೆಲ್ ಜಗದಾಂಬಕ್ಕೆ ಕರೆದೊಯ್ದಿದ್ದರು ಎಂದು ಎನ್‌ಐಎ ತಿಳಿಸಿದೆ.

ಅಲ್ಲಿಂದ ಮೂವರು ಉಗ್ರರನ್ನು ತಮ್ಮ ವಾಹನದಲ್ಲಿ ನಗ್ರೋಟಕ್ಕೆ ಸಾಗಿಸಿದ್ದರು. 2016ರ ನವೆಂಬರ್ 28ರಂದು ನಗ್ರೋಟದಲ್ಲಿ ಸೇನಾಪಡೆಯ ಅಧಿಕಾರಿಗಳ ಕ್ಯಾಂಟೀನ್ ಕಟ್ಟಡದ ಮೇಲೆ ಉಗ್ರರ ದಾಳಿ ನಡೆದಿತ್ತು. ದಾಳಿಯಲ್ಲಿ ಸೇನಾಪಡೆಯ 7 ಯೋಧರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದರು. ಪಾಕ್ ಮೂಲದ ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಜೆಇಎಂನ ನಾಲ್ವರು ಸದಸ್ಯರನ್ನು ಎನ್‌ಐಎ ಬಂಧಿಸಿತ್ತು.

ಮಸೂದ್ ಅಝರ್‌ನ ಸಹೋದರ ಅಬ್ದುಲ್ ರವೂಫ್ ಅಸ್ಗರ್ ಈ ಆತ್ಮಹತ್ಯಾ ದಾಳಿಯ ಸೂತ್ರಧಾರ ಎಂಬುದು ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು. ಸಂಘಟನೆಯ ಸ್ಥಳೀಯ (ಕಾಶ್ಮೀರ) ಸದಸ್ಯ ಮುಹಮ್ಮದ್ ಆಶಿಖ್ ಬಾಬಗೆ ತರಬೇತಿ, ಹಣ ಪೂರೈಕೆ , ಶಸ್ತ್ರಾಸ್ತ್ರ ಹಾಗೂ ಮೊಬೈಲ್ ಫೋನ್ ಹಾಗೂ ಇತರ ಸಾಮಾಗ್ರಿಗಳನ್ನು ಒದಗಿಸುವಂತೆ ಈತ ಜೈಶೆ ಮುಹಮ್ಮದ್‌ನ ಕಮಾಂಡರ್ ಮುಫ್ತಿ ಅಸ್ಗರ್‌ಗೆ ಸೂಚಿಸಿದ್ದ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಆಶಿಕ್ ಬಾಬ ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದ. ಈತನಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಿ ಭಾರತಕ್ಕೆ ಕಳುಹಿಸಲಾಗಿತ್ತು. ತನಗೆ ಒದಗಿಸಲಾಗಿದ್ದ ಜಿಪಿಎಸ್ ವ್ಯವಸ್ಥೆಯಿರುವ ಮೊಬೈಲ್ ಫೋನ್ ಮೂಲಕ ಈತ ಪಾಕ್‌ನಲ್ಲಿರುವ ಜೆಇಎಂ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಎನ್‌ಐಎ ತಿಳಿಸಿದೆ. ಆರೋಪಿಗಳು ವಿಚಾರಣೆ ಸಂದರ್ಭ ಹೊರಗೆಡವಿದ ಮಾಹಿತಿ, ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣೆ, ಜಪ್ತಿ ಮಾಡಲಾಗಿರುವ ಡಿಜಿಟಲ್ ಯಂತ್ರಗಳಿಂದ ( ಪರಸ್ಪರ ಕಾನೂನು ಸಹಾಯ ಒಪ್ಪಂದದ ಮೂಲಕ )ಪಡೆಯಲಾಗಿರುವ ಡಿಜಿಟಲ್ ಸಾಕ್ಷಗಳ ಆಧಾರದಿಂದ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News