ಕೇಜ್ರಿವಾಲ್ ಮೇಲೆ ದಾಳಿ ನಡೆಯುವುದು ಬಿಜೆಪಿ ನಾಯಕರಿಗೆ ತಿಳಿದಿತ್ತು: ಸಿಸೋಡಿಯ ಆರೋಪ

Update: 2018-11-21 16:26 GMT

 ಹೊಸದಿಲ್ಲಿ, ನ.21: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಯಲಿದೆ ಎಂಬುದು ಬಿಜೆಪಿ ನಾಯಕತ್ವಕ್ಕೆ ತಿಳಿದಿತ್ತು . ಜನರಿಗಾಗಿ ಕೆಲಸ ಮಾಡುತ್ತಿರುವ ಕೇಜ್ರಿವಾಲ್ ರನ್ನು ನಿವಾರಿಸಬೇಕೆಂಬುದು ಬಿಜೆಪಿ ನಾಯಕರ ಆಶಯವಾಗಿದೆ ಎಂದು ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

  ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಕೇಜ್ರಿವಾಲ್ ಗೆ ಕರೆ ಮಾಡಿ , ದಾಳಿಯ ಬಗ್ಗೆ ದೂರು ದಾಖಲಿಸುವಂತೆ ತಿಳಿಸಿದ್ದಾರೆ. “ಮುಖ್ಯಮಂತ್ರಿಯ ಮೇಲೆ ನಡೆದಿರುವ ದಾಳಿಯ ಬಗ್ಗೆ ತನಿಖೆ ನಡೆಸುವ ರೀತಿ ಹೀಗೆಯಾ ?” ಎಂದು ಸಿಸೋಡಿಯಾ ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ. ದಿಲ್ಲಿ ಸಚಿವಾಲಯದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯ ಹೊರಗಡೆ ಮಂಗಳವಾರ ವ್ಯಕ್ತಿಯೊಬ್ಬ ಕೇಜ್ರಿವಾಲ್ ಮೇಲೆ ಮೆಣಸಿನ ಪುಡಿ ಎರಚಿದ್ದ. ಘಟನೆಯಲ್ಲಿ ಕೇಜ್ರಿವಾಲರ ಕನ್ನಡಕ ತುಂಡಾಗಿತ್ತು. ಆದರೆ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸಿದವನನ್ನು ಅನಿಲ್ ಕುಮಾರ್ ಶರ್ಮ ಎಂದು ಗುರುತಿಸಲಾಗಿದೆ.

ಶರ್ಮನ ಫೇಸ್‌ಬುಕ್ ಪುಟದಲ್ಲಿ ಆತ ಬಿಜೆಪಿ ಸದಸ್ಯನೆಂಬ ಮಾಹಿತಿಯಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಈ ಮಧ್ಯೆ, ಕೇಜ್ರಿವಾಲ್ ನಡೆಸಿದ ನಾಟಕವಿದು ಎಂದು ಟೀಕಿಸಿರುವ ಬಿಜೆಪಿ ದಿಲ್ಲಿ ಘಟಕಾಧ್ಯಕ್ಷ ಮನೋಜ್ ತಿವಾರಿ, ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News