ದೇಶದಲ್ಲಿ 539 ಮಕ್ಕಳ ಪಾಲನಾ ಕೇಂದ್ರಗಳು ಬಂದ್

Update: 2018-11-22 15:05 GMT

ಹೊಸದಿಲ್ಲಿ,ನ.22: ಕಳೆದ ಆಗಸ್ಟ್‌ನಲ್ಲಿ ಆಶ್ರಯ ಧಾಮಗಳಲ್ಲಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಸರಕಾರವು ದೇಶಾದ್ಯಂತ 539 ಮಕ್ಕಳ ಪಾಲನಾ ಸಂಸ್ಥೆ(ಸಿಸಿಐ)ಗಳನ್ನು ಮುಚ್ಚಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.

ಮಕ್ಕಳ ವಾಸಕ್ಕೆ ಅರ್ಹವಾಗಿರದಿದ್ದ ಅಥವಾ ನಿಯಮಗಳನ್ನು ಉಲ್ಲಂಘಿಸಿದ್ದ ಅಥವಾ ನೋಂದಣಿಯಾಗಿರದಿದ್ದ ಸಿಸಿಐಗಳನ್ನು ಮುಚ್ಚಲಾಗಿದೆ ಮತ್ತು ಅಲ್ಲಿದ್ದ ಮಕ್ಕಳನ್ನು ಇತರ ಸಿಸಿಐಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಅತ್ಯಧಿಕ ಸಂಖ್ಯೆಯಲ್ಲಿ ಸಿಸಿಐಗಳನ್ನು ಮಹಾರಾಷ್ಟ್ರ(377)ದಲ್ಲಿ ಮುಚ್ಚಲಾಗಿದ್ದು, ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ(78) ಮತ್ತು ತೆಲಂಗಾಣ(32) ರಾಜ್ಯಗಳಿವೆ.

ಬಿಹಾರದ ಮುಝಫ್ಫರಪುರದ ಆಶ್ರಯ ಧಾಮದಲ್ಲಿಯ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು ಕಳೆದ ಮೇ ತಿಂಗಳಿನಲ್ಲಿ ಮತ್ತು ಉತ್ತರ ಪ್ರದೇಶದ ದೇವರಿಯಾದ ಆಶ್ರಯಧಾಮದಲ್ಲಿ ಇಂತಹ ಪ್ರಕರಣಗಳು ಆಗಸ್ಟ್‌ನಲ್ಲಿ ಬೆಳಕಿಗೆ ಬಂದಿದ್ದವು.

ದೇಶದಲ್ಲಿರುವ ಸಿಸಿಐಗಳ ಸಮಗ್ರ ಪರಿಶೀಲನೆ ನಡೆಸುವಂತೆ ರಾಷ್ಟ್ರಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸೂಚಿಸಿದ್ದ ಸಚಿವಾಲಯವು,ಎರಡು ತಿಂಗಳಲ್ಲಿ ನೋಂದಾವಣೆ ಮಾಡಿಕೊಳ್ಳುವಂತೆ ನೋಂದಣಿಯಾಗಿರದ ಸಂಸ್ಥೆಗಳಿಗೆ ನಿರ್ದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News