ಗಜ ಚಂಡಮಾರುತ: ಕೇಂದ್ರದಿಂದ 15,000 ಕೋ.ರೂ. ಆರ್ಥಿಕ ನೆರವು ಕೋರಿದ ತಮಿಳುನಾಡು

Update: 2018-11-22 15:17 GMT

ಹೊಸದಿಲ್ಲಿ,ನ.22: ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಗುರುವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗಜ ಚಂಡಮಾರುತವು ರಾಜ್ಯದಲ್ಲಿ ವಿನಾಶವನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರದಿಂದ 15,000 ಕೋ.ರೂ.ಗಳ ಆರ್ಥಿಕ ನೆರವನ್ನು ಕೋರಿದರು.

ರಾಜ್ಯದ 12 ಜಿಲ್ಲೆಗಳಲ್ಲಿ ಅಬ್ಬರವನ್ನು ಮೆರೆದಿದ್ದ ಗಜ ಚಂಡಮಾರುತಕ್ಕೆ 63 ಜನರು ಬಲಿಯಾಗಿದ್ದು,ನೂರಾರು ಜನರು ನಿರ್ವಸಿತರಾಗಿದ್ದಾರೆ. ನೆರೆಯ ಪುದುಚೇರಿಯೂ ಚಂಡಮಾರುತದಿಂದ ಪೀಡಿತಗೊಂಡಿತ್ತು.

ಪ್ರಧಾನಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ ಅವರು,ಚಂಡಮಾರುತದಿಂದ ಉಂಟಾಗಿರುವ ಹಾನಿಯ ಪ್ರಮಾಣವನ್ನು ವಿವರಿಸಿ ಪ್ರಧಾನಿಗಳಿಗೆ ಅಹವಾಲು ಸಲ್ಲಿಸಿದ್ದೇನೆ. ಅಲ್ಲದೆ ತಾತ್ಕಾಲಿಕ ನವೀಕರಣ ಚಟುವಟಿಕೆಗಳಿಗಾಗಿ ತಕ್ಷಣವೇ 1,500 ಕೋ.ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕೋರಿದ್ದೇನೆ. ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರದ ತಂಡವೊಂದನ್ನು ರವಾನಿಸುವಂತೆಯೂ ಆಗ್ರಹಿಸಿದ್ದು,ಅದು ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ರಾಜ್ಯ ಸರಕಾರವು 1,000 ಕೋ.ರೂ.ಗಳನ್ನು ಬಿಡುಗಡೆಗೊಳಿಸಿದೆಯಾದರೂ,ಬಿಕ್ಕಟ್ಟನ್ನು ನಿರ್ವಹಿಸಲು ಹೆಚ್ಚಿನ ಆರ್ಥಿಕ ನೆರವಿಗಾಗಿ ಕೇಂದ್ರದ ಮೊರೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News