×
Ad

ಸರಕಾರಗಳು ಸಾಮಾಜಿಕ ಮಾಧ್ಯಮಗಳ ಮೇಲೆ ರಚನೆಯಾಗಿವೆಯೇ ?

Update: 2018-11-22 21:04 IST

ಶ್ರೀನಗರ,ನ.22: ತನ್ನ ದೂರವಾಣಿ ಕರೆಗಳು ಮತ್ತು ಫ್ಯಾಕ್ಸ್ ಸ್ವೀಕರಿಸಲ್ಪಡದಿದ್ದರಿಂದ ಪಿಡಿಪಿ-ಎನ್‌ಸಿ-ಕಾಂಗ್ರೆಸ್ ಮೈತ್ರಿಯೊಂದಿಗೆ ಸರಕಾರ ರಚನೆಯ ಹಕ್ಕು ಮಂಡನೆಯನ್ನು ತಾನು ಟ್ವೀಟ್ ಮಾಡಬೇಕಾಯಿತು ಎಂಬ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಆರೋಪಕ್ಕೆ ಗುರುವಾರ ಪ್ರತಿಕ್ರಿಯಿಸಿದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು,ಸರಕಾರಗಳು ಸಾಮಾಜಿಕ ಮಾಧ್ಯಮಗಳ ಮೇಲೆ ರಚನೆಯಾಗಿವೆಯೇ ಎಂದು ಪ್ರಶ್ನಿಸಿದರು.

 ಸರಕಾರ ರಚನೆಗೆ ಎರಡು ಹಕ್ಕು ಕೋರಿಕೆಗಳು ಮಂಡನೆಯಾದ ಬೆನ್ನಿಗೇ ವಿಧಾನಸಭೆಯನ್ನು ವಿಸರ್ಜಿಸುವ ತನ್ನ ನಿರ್ಧಾರವನ್ನೂ ಮಲಿಕ್ ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ರಚನೆಯನ್ನು ತಡೆಯಲು ಸೂಚನೆಯನ್ವಯ ಮಲಿಕ್ ಈ ಕ್ರಮವನ್ನು ಕೈಗೊಂಡಿದ್ದಾರೆ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ. ವಿಧಾನಸಭೆಯ ವಿಸರ್ಜನೆಯಿಂದಾಗಿ ಈಗ ರಾಜ್ಯದಲ್ಲಿ ಅವಧಿಗೆ ಎರಡು ವರ್ಷಗಳ ಮುನ್ನವೇ ಚುನಾವಣೆ ನಡೆಯಲಿದೆ.

ಮುಫ್ತಿ ಅಥವಾ ಅಧಿಕಾರಕ್ಕೆ ಇನ್ನೋರ್ವ ಹಕ್ಕು ಮಂಡನೆದಾರ ಸಜ್ಜದ್ ಲೋನೆ ಅವರಿಂದ ಯಾವುದೇ ಸಂದೇಶ ತನಗೆ ಬಂದಿರಲಿಲ್ಲ ಎಂದು ಮಲಿಕ್ ಒತ್ತಿಹೇಳಿದರು.

ಮುಫ್ತಿ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು,ಸರಕಾರಗಳು ಸಾಮಾಜಿಕ ಮಾಧ್ಯಮಗಳ ಮೇಲೆ ರಚನೆಯಾಗಿವೆಯೇ? ತಾನು ಟ್ವೀಟ್ ಮಾಡುವುದಿಲ್ಲ,ತನ್ನ ಟ್ವೀಟ್‌ಗಳನ್ನು ನೋಡುವುದೂ ಇಲ್ಲ ಎಂದರು.

ಬುಧವಾರ ಈದ್ ಮೀಲಾದ್ ಆಗಿದ್ದರಿಂದ ರಾಜಭವನದಲ್ಲಿ ಸಿಬ್ಬಂದಿಗಳಿರಲಿಲ್ಲ. ಫ್ಯಾಕ್ಸ್ ಆಪರೇಟರ್ ಬಿಡಿ,ತನ್ನ ಬಾಣಸಿಗ ಕೂಡ ಇರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ ಅವರು,ತಾನು ಮುಫ್ತಿಯವರ ಫ್ಯಾಕ್ಸ್ ಸ್ವೀಕರಿಸಿದ್ದರೂ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಈ ಮಹಾಮೈತ್ರಿ ಸಮಯಸಾಧಕ ತನದ್ದಾಗಿತ್ತು. ಚುನಾವಣೆಗಳನ್ನು ಬಯಸದವರಿಂದ,ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸಿದವರಿಂದ ಕುದುರೆ ವ್ಯಾಪಾರಕ್ಕೆ ಪ್ರಯತ್ನ ನಡೆದಿತ್ತು. ತನಗೆ ಯಾವುದೇ ಪಟ್ಟಭದ್ರ ಹಿತಾಸಕ್ತಿಯಿರಲಿಲ್ಲ,ಆದರೆ ರಾಜ್ಯದ ಹಿತಾಸಕ್ತಿಯಲ್ಲಿ ಕ್ರಮವನ್ನು ತೆಗೆದುಕೊಂಡಿದ್ದೇನೆ. ಯಾರ ಬಗ್ಗೆಯೂ ತನಗೆ ತಾರತಮ್ಯವಿಲ್ಲ,ತಾನು ಜಮ್ಮು-ಕಾಶ್ಮೀರದ ಸಂವಿಧಾನವನ್ನು ಅನುಸರಿಸಿದ್ದೇನೆ. ತಾನು ಈ ಬಗ್ಗೆ ದಿಲ್ಲಿಯನ್ನೂ ಕೇಳಿರಲಿಲ್ಲ. ಮುಫ್ತಿಯವರ ಅಥವಾ ಬಿಜೆಪಿ ಬೆಂಬಲದ ಲೋನೆಯವರ ಮೈತ್ರಿಕೂಟ ಸರಕಾರ ರಚನೆಗೆ ಅಗತ್ಯ ಸಂಖ್ಯೆಯ ಶಾಸಕರನ್ನು ಹೊಂದಿಲ್ಲ ಎನ್ನುವುದು ತನಗೆ ತಿಳಿದಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News