×
Ad

ಐತಿಹಾಸಿಕ ಪಾಕ್ ಗುರುದ್ವಾರಾಕ್ಕೆ ತೆರಳಲು ಕರ್ತಾರಪುರ ಕಾರಿಡಾರ್ ಯೋಜನೆಗೆ ಅಸ್ತು

Update: 2018-11-22 21:08 IST

ಹೊಸದಿಲ್ಲಿ,ನ.22: ಗುರು ನಾನಕ್ ಅವರು ತನ್ನ ಬದುಕಿನ ಕೊನೆಯ 18 ವರ್ಷಗಳನ್ನು ಕಳೆದಿದ್ದರು ಎನ್ನಲಾಗಿರುವ ಪಾಕಿಸ್ತಾನದಲ್ಲಿಯ ಐತಿಹಾಸಿಕ ಗುರುದ್ವಾರಕ್ಕೆ ಯಾತ್ರಿಗಳ ಸುಗಮ ಸಂಚಾರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕಾರಿಡಾರ್ ನಿರ್ಮಾಣ ಯೋಜನೆಗೆ ಕೇಂದ್ರ ಸಂಪುಟವು ಗುರುವಾರ ಹಸಿರು ನಿಶಾನೆಯನ್ನು ತೋರಿಸಿದೆ. ತನ್ನ ಭೂಪ್ರದೇಶದಲ್ಲಿ ಸೂಕ್ತ ಸೌಲಭ್ಯಗಳೊಂದಿಗೆ ಗುರುದ್ವಾರಾಕ್ಕೆ ಕಾರಿಡಾರ್ ನಿರ್ಮಿಸುವಂತೆಯೂ ಭಾರತವು ಪಾಕ್ ಸರಕಾರವನ್ನು ಕೋರಿದೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಲಾಹೋರ್‌ನಿಂದ 120 ಕಿ.ಮೀ. ದೂರದಲ್ಲಿರುವ ಕರ್ತಾರಪುರ ಸಾಹಿಬ್ ಗುರುದ್ವಾರಾವು ಐತಿಹಾಸಿಕ ಸಿಖ್ ಯಾತ್ರಾಸ್ಥಳವಾಗಿದೆ.

ಗುರು ನಾನಕ್ ದೇವ ಅವರ 550ನೇ ಜಯಂತಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಕಾರಿಡಾರ್ ನಿರ್ಮಾಣಕ್ಕೆ ನಿರ್ಧಾರವನ್ನ ಕೈಗೊಂಡಿದೆ. ತನ್ಮಧ್ಯೆ 3000ಕ್ಕೂ ಅಧಿಕ ಸಿಖ್ ಯಾತ್ರಿಗಳು ಬುಧವಾರ ಲಾಹೋರ್ ತಲುಪಿದ್ದು,ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗುರು ನಾನಕ್‌ರ ಜನ್ಮಸ್ಥಳವಾದ ನಾನಕಾನಾ ಸಾಹಿಬ್ ಗುರುದ್ವಾರಾ ಜನಮೇಸ್ಥಾನಕ್ಕೆ ಪ್ರಯಾಣ ಮುಂದುವರಿಸಿದರು.

ಪಾಕಿಸ್ತಾನದಲ್ಲಿ ರಾವಿನದಿ ದಂಡೆಯಲ್ಲಿರುವ ಗುರುದ್ವಾರಾ ದರ್ಬಾರ್ ಸಾಹಿಬ್ ಕರ್ತಾರಪುರಕ್ಕ್ಕೆ ತೆರಳುವ ಸಿಖ್ ಯಾತ್ರಿಗಳ ಅನುಕೂಲಕ್ಕಾಗಿ ಭಾರತವು ಪಂಜಾಬಿನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ನಿಂದ ಅಂತರರಾಷ್ಟ್ರೀಯ ಗಡಿಯವರೆಗೆ ಸುಸಜ್ಜಿತ ಕಾರಿಡಾರ್‌ನ್ನು ನಿರ್ಮಿಸಲಿದೆ ಎಂದು ಸಭೆಯ ಬಳಿಕ ಗೃಹಸಚಿವ ರಾಜನಾಥ ಸಿಂಗ್ ಅವರು ಟ್ವೀಟಿಸಿದರೆ,ಯಾತ್ರಿಗಳಿಗೆ ವೀಸಾ ವ್ಯವಸ್ಥೆಯನ್ನು ಮಾಡಲಾಗುವುದು. ಕಾರಿಡಾರ್ 3-4 ಕಿ.ಮೀೂ.ಉದ್ದವಿರಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಕರ್ತಾರಪುರ ಗಡಿಯನ್ನು ತೆರೆಯುವ ಪಾಕಿಸ್ತಾನದ ಪ್ರಸ್ತಾಪವನ್ನು ಭಾರತವು ಒಪ್ಪಿಕೊಂಡಿರುವದು ಉಭಯ ರಾಷ್ಟ್ರಗಳಲ್ಲಿ ಶಾಂತಿ ಪ್ರತಿಪಾದಕರ ಪಾಲಿಗೆ ಸಿಕ್ಕ ವಿಜಯವಾಗಿದೆ ಎಂದು ಪಾಕಿಸ್ತಾನದ ವಾರ್ತಾಸಚಿವ ಫವಾದ್ ಚೌಧರಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News