ಮತದಾರರ ಪಟ್ಟಿಯಲ್ಲಿ ಸೇರಲು ಅರ್ಹತೆಯೇನು?

Update: 2018-11-23 04:06 GMT

ಮತದಾನದಲ್ಲಿ ಅತಿ ಹೆಚ್ಚು ನಾಗರಿಕರು ಭಾಗವಹಿಸುವುದು, ಚುನಾವಣೆಯ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಒಂದು ಚುನಾವಣೆಯಲ್ಲಿ ಚಲಾವಣೆಯಾದ ಮತ ಆಧಾರದಲ್ಲೇ ಚುನಾವಣೆ ಸಫಲವಾಗಿದೆಯೋ, ವಿಫಲವಾಗಿದೆಯೋ ಎನ್ನುವುದನ್ನು ನಿರ್ಧರಿಸುತ್ತೇವೆ. ಎಲ್ಲ ಮತದಾರರನ್ನು ಭಾಗವಹಿಸುವಂತೆ ಮಾಡಲು ಸರಕಾರವೂ ಜಾಹೀರಾತಿಗಾಗಿ ಹಣ ವೆಚ್ಚ ಮಾಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿ, ಆ ಮೂಲಕ ಈ ದೇಶದ ನಿಜವಾದ ಪ್ರಜೆಗಳನ್ನು ಮತ ಚಲಾಯಿಸುವುದರಿಂದ ವಂಚಿಸುವ ಸಂಚೊಂದು ನಡೆಯುತ್ತಿದೆ. ಈ ಸಂಚಿನಲ್ಲಿ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಪೊಲೀಸ್ ವ್ಯವಸ್ಥೆ ಭಾಗಿಯಾಗುತ್ತಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೇ ಅಪಾಯಕಾರಿಯಾಗಿದೆ. ಈ ಹಿಂದೆಲ್ಲ ನಕಲಿ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದರು. ಓರ್ವನೇ ಎರಡೆರಡು ಬಾರಿ ಮತ ಚಲಾಯಿಸಿದ ಉದಾಹರಣೆಗಳಿದ್ದವು. ಯಾರದೋ ಹೆಸರಿನಲ್ಲಿ ಇನ್ನಾರೋ ಮತ ಚಲಾಯಿಸಿದ ಘಟನೆಗಳೂ ನಡೆಯುತ್ತಿದ್ದವು.

ಈ ಎಲ್ಲ ವಂಚನೆಗಳ ಹಿಂದೆ ಸ್ಥಳೀಯ ರೌಡಿಗಳು, ಪುಡಿ ರಾಜಕೀಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಅರ್ಹ ಮತದಾರರ ಹೆಸರುಗಳನ್ನೇ ಪಟ್ಟಿಯಿಂದ ತೆಗೆದು ಹಾಕುವ ಮೂಲಕ, ತಮಗೆ ವಿರೋಧವಾಗಿ ಮತ ಚಲಾಯಿಸುವ ಮತದಾರರನ್ನು ಚುನಾವಣೆಯಿಂದಲೇ ಹೊರಗಿಡುವ ಕೆಲಸವೊಂದು ನಡೆಯುತ್ತಿದೆ. ತಳಸ್ತರದ ಮುಖ್ಯವಾಗಿ ದಲಿತ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮತದಾರರೇ ಇವರಲ್ಲಿ ಅಧಿಕ ಎನ್ನುವುದು ಇನ್ನೊಂದು ಮಹತ್ವದ ಅಂಶವಾಗಿದೆ. ಅಸ್ಸಾಂನಲ್ಲಿ ಅಕ್ರಮ ವಲಸೆಗಾರರನ್ನು ಗುರುತಿಸುವ ಹೆಸರಿನಲ್ಲಿ ಕೂಡ ಇದು ನಡೆದಿದೆ. ಅಸ್ಸಾಂನಲ್ಲಿ ವಿದೇಶಿ ವಲಸೆಗಾರರು ಅದರಲ್ಲೂ ಬಾಂಗ್ಲಾದ ಕೂಲಿ ಕಾರ್ಮಿಕರು ಹಲವು ದಶಕಗಳಿಂದ ನೆಲೆಯೂರಿದ್ದಾರೆ. ಇದೀಗ ಸ್ವದೇಶಿಗಳು ಮತ್ತ್ತು ವಿದೇಶಿಗಳನ್ನು ಗುರುತಿಸುವ ಎನ್‌ಆರ್‌ಸಿ ವರದಿಯ ಕರಡು ಪ್ರತಿ ಹೊರ ಬಿದ್ದಿದೆ. ಲಕ್ಷಾಂತರ ಜನರನ್ನು ಭಾರತೀಯ ಪೌರರಲ್ಲ ಎಂದು ಗುರುತಿಸಲಾಗಿದೆ. ಇಲ್ಲಿ ಸರಕಾರದ ಉದ್ದೇಶ ನಿಜವಾದ ವಿದೇಶಿಯರನ್ನು ಗುರುತಿಸುವುದಕ್ಕಿಂತಲೂ, ಆ ಹೆಸರಲ್ಲಿ ತನ್ನ ಪರವಾಗಿರದ ಮತದಾರರನ್ನು ಹೊರಗಿಡುವುದಾಗಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಎನ್‌ಆರ್‌ಸಿ ಕರಡು ಪ್ರತ್ರಿಯಲ್ಲಿರುವ ಭಾರೀ ತಪ್ಪುಗಳು ಅಸ್ಸಾಮನ್ನು ಧೃತಿಗೆಡಿಸಿದೆ. ಹಲವರು ಆತಂಕದಿಂದ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಪ್ರಜೆಗಳನ್ನೂ ಸೇರಿಸಲಾಗಿದೆ ಎನ್ನುವ ದೊಡ್ಡ ಆರೋಪ ಕೇಳಿ ಬರುತ್ತಿದೆ. ಇದರ ವಿರುದ್ಧ ಭಾರೀ ಪ್ರತಿಭಟನೆಗಳೂ ನಡೆಯುತ್ತಿವೆ. ದುರಂತವೆಂದರೆ ಅಸ್ಸಾಂನಲ್ಲಿ ನಡೆಸಿದ ಪ್ರಯೋಗವನ್ನು ಕರ್ನಾಟಕದಲ್ಲೂ ನಡೆಸಲು ಸಂಚು ನಡೆಯುತ್ತಿದೆ. ಈಗಾಗಲೇ ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಕರ್ನಾಟಕದಲ್ಲಿ 2017-18ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಸಲ್ಲಿಸಲಾದ 2.8 ಲಕ್ಷ ಅರ್ಜಿಗಳಲ್ಲಿ ಶೇ. 62ರಷ್ಟು ತಿರಸ್ಕೃತಗೊಂಡಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ ಮತ್ತು ಅವರಲ್ಲಿ ಶೇ. 20ರಷ್ಟು ಅರ್ಜಿಗಳು ಅವರು ಭಾರತದ ಪೌರರು ಅಲ್ಲ ಎನ್ನುವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ. ಇಲ್ಲೂ ತಿರಸ್ಕೃತಗೊಂಡ ಅರ್ಜಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದು ಮುಸ್ಲಿಮರು. ಆ ಬಳಿಕ ದಲಿತರು ಮತ್ತು ತೀರಾ ಕೆಳಜಾತಿಯ ಮತದಾರರು. ಹಲವರಿಗೆ ತಮ್ಮ ಅರ್ಜಿ ತಿರಸ್ಕೃತಗೊಂಡಿರುವುದೇ ತಿಳಿದಿಲ್ಲ. ಇನ್ನು ಉಳಿದಂತೆ ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಹೊಂದಿದವರ ಅರ್ಜಿಯನ್ನೂ ತಿರಸ್ಕರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಅನರ್ಹತೆಯನ್ನು ಪ್ರಶ್ನಿಸುವುದಕ್ಕೂ ಸಂತ್ರಸ್ತರಿಗೆ ಅವಕಾಶ ನೀಡಿಲ್ಲ. ಅರ್ಹ ಮತದಾರರು ಮತದಾನದಿಂದ ಯಾವ ಕಾರಣಕ್ಕೂ ವಂಚಿತವಾಗಬಾರದು ಎನ್ನುವುದು ಸಂವಿಧಾನದ ಅತಿ ದೊಡ್ಡ ಆಶಯ. ಅಷ್ಟೇ ಅಲ್ಲ, ಪ್ರಜಾಸತ್ತೆಯ ಉಳಿವಿನ ದೃಷ್ಟಿಯಿಂದಲೂ ಇದು ಮುಖ್ಯ. ಹೀಗಿರುವಾಗ, ಏಕಾಏಕಿ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದರೆ, ಯಾಕೆ ತಿರಸ್ಕರಿಸಲಾಯಿತು? ಎನ್ನುವುದನ್ನು ಕೇಳುವ ಹಕ್ಕಂತೂ ಈ ದೇಶದ ಪ್ರಜೆಗಳಿಗಿದೆ. ಅದಕ್ಕೆ ಉತ್ತರಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿದೇಶಿಯರೋ, ನುಸುಳುಕೋರರೋ ಸೇರಿಕೊಂಡಿದ್ದರೆ ಅವರನ್ನು ಪತ್ತೆ ಹಚ್ಚಿ ಸರಕಾರ ಸ್ವದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇದರಲ್ಲಿ ಯಾವ ರಾಜಿಯನ್ನೂ ಮಾಡಬಾರದು. ಕರ್ನಾಟಕದಲ್ಲಿ ಬಾಂಗ್ಲಾದೇಶಿಯರು ಬಂದು ಸೇರಿಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ಕಡಿಮೆ ದರದಲ್ಲಿ ಕೂಲಿ ಕಾರ್ಮಿಕರು ದೊರಕುತ್ತಾರೆ ಎಂದು ಅಸ್ಸಾಮಿನಂತಹ ಪ್ರದೇಶಗಳಿಂದ ಇವರನ್ನು ಆಮದು ಮಾಡಿಕೊಂಡವರೇ ಜಾಸ್ತಿ. ಎಸ್ಟೇಟ್‌ಗಳಲ್ಲಿ, ಕಾಫಿ ತೋಟಗಳಲ್ಲಿ ಇವರನ್ನು ದುಡಿಸಲಾಗುತ್ತದೆ. ಒಂದು ವೇಳೆ ಬಾಂಗ್ಲಾದೇಶಿಯರು ಕರ್ನಾಟಕದಲ್ಲಿ ನುಸುಳಿದ್ದಾರೆ ಎಂದಾದರೆ, ಈ ನಾಡಿನ ಕಾಫಿತೋಟ, ಎಸ್ಟೇಟ್‌ಗಳಿಗೆ ದಾಳಿ ನಡೆಸಿ ಈ ಕಾರ್ಮಿಕರನ್ನು ಮರಳಿ ಬಾಂಗ್ಲಾ ದೇಶಕ್ಕೆ ಕಳುಹಿಸಿಕೊಡಲಿ. ಆದರೆ ಇವರ ಹೆಸರಿನಲ್ಲಿ ಈ ನಾಡಿನಲ್ಲಿರುವ ನಿಜವಾದ ಪ್ರಜೆಗಳನ್ನ್ನು ಮತದಾನದಿಂದ ವಂಚಿಸುವುದು ಸಲ್ಲ. ಇಷ್ಟಕ್ಕೂ ಬಾಂಗ್ಲಾದಿಂದ ಅಕ್ರಮವಾಗಿ ಕರ್ನಾಟಕಕ್ಕೆ ವಲಸೆ ಬರುತ್ತಾರೆ ಎಂದರೆ ಅದನ್ನು ನಾವು ಭದ್ರತಾ ವೈಫಲ್ಯ ಎಂದು ಕರೆಯಬೇಕಾಗುತ್ತದೆ. ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮಗಳು ಇದಕ್ಕೆ ಮುಖ್ಯ ಕಾರಣ. ಆದುದರಿಂದ, ಈ ನುಸುಳುವಿಕೆಯನ್ನು ಪ್ರೋತ್ಸಾಹಿಸುವ ಶಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಸೂಕ್ತ ದಾಖಲೆ ಹೊಂದಿದವರನ್ನು, ಸ್ಪಷ್ಟ ಕಾರಣ ಕೊಡದೆ ಪೌರತ್ವ ಹೊಂದಿಲ್ಲ ಎನ್ನುವುದು ಅಪರಾಧ. ಅವರ ಬದುಕುವ ಹಕ್ಕನ್ನೇ ನಿರಾಕರಿಸಿದಂತೆ. ಇಂತಹ ಅಪರಾಧ ಎಸಗುವ ಅಧಿಕಾರಿಗಳು ಚುನಾವಣಾ ಅಧಿಕಾರಿಗಳ ನಡುವೆ ಸೇರಿಕೊಂಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹಸ್ತಕ್ಷೇಪ ನಡೆಸಿ ಚುನಾವಣೆಯ ಫಲಿತಾಂಶಗಳನ್ನು ತಮಗೆ ಪೂರಕವಾಗಿ ಬದಲಾಯಿಸುವುದು ಅವರ ಉದ್ದೇಶವಾಗಿದೆ..

 ರಾಜ್ಯದಲ್ಲಿ ಜಾತ್ಯತೀತ ಎಂದು ಹೇಳಿಕೊಳ್ಳುವ ಮೈತ್ರಿ ಸರಕಾರವಿದೆ. ಹಲವು ಅರ್ಹರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಈಗಾಗಲೇ ಸರಕಾರದ ಗಮನಕ್ಕೂ ಬಂದಿರುತ್ತದೆ. ಈ ಸಂಚಿನಲ್ಲಿ ಯಾರಿದ್ದಾರೆ ಮತ್ತು ಇದರಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವುದನ್ನು ಸರಕಾರ ಈಗಲೇ ಅರ್ಥ ಮಾಡಿಕೊಳ್ಳುವುದು ಒಳಿತು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚುವುದರಿಂದ ಯಾವ ಪ್ರಯೋಜನವೂ ಇಲ್ಲ. ಫಲಿತಾಂಶ ಘೋಷಣೆಯಾದ ಬಳಿಕ ಗೋಳಾಡಿದರೆ ಅದಕ್ಕೆ ಯಾವ ಅರ್ಥವೂ ಇಲ್ಲ. ಆದುದರಿಂದ, ತಕ್ಷಣ ಸರಕಾರ ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕಡೆಗೆ ತನ್ನ ಗಮನವನ್ನು ಹರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News