ಜೆಡಿಯು ಮಟನ್ ಬಿರಿಯಾನಿಗೆ ಕುರಿಗಳಾಗದ ಮುಸ್ಲಿಮರು

Update: 2018-11-24 11:21 GMT

ಪಾಟ್ನಾ, ನ.24: ಕಳೆದ ವರ್ಷದ ಜುಲೈ ತಿಂಗಳಲ್ಲಿ ಮಹಾಮೈತ್ರಿ ತೊರೆದು ಬಿಜೆಪಿ ನೇತೃತ್ವದ ಎನ್ ಡಿಎ ತೆಕ್ಕೆಗೆ ಮತ್ತೆ ಮರಳಿದಂದಿನಿಂದ ಜೆಡಿಯು ಮುಸ್ಲಿಮರನ್ನು ತನ್ನ ಪಕ್ಷದತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಂತಹ ಒಂದು ಕಸರತ್ತಿನ ಭಾಗವಾಗಿ ಗುರುವಾರ ಪಾಟ್ನಾದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಹೆಚ್ಚಿನ ಅಲ್ಪಸಂಖ್ಯಾತರು, ಮುಖ್ಯವಾಗಿ ಮುಸ್ಲಿಮರನ್ನು ಸೆಳೆಯುವ ಯತ್ನದ ಅಂಗವಾಗಿ 600 ಕೆಜಿಯಷ್ಟು ಮಟನ್ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಆದರೆ ಸಭೆಗೆ ಕೇವಲ 500 ಮಂದಿ ಮಾತ್ರ ಆಗಮಿಸಿದ್ದು, 600 ಕೆಜಿ ಮಟನ್ ಬಿರಿಯಾನಿ ವ್ಯರ್ಥವಾಗಿದೆ.

ಸಭೆ ನಡೆದ ಎಸ್‍ಕೆಎಂ ಮೆಮೋರಿಯಲ್ ಹಾಲ್ ಹಲವಾರು ಮುಸ್ಲಿಂ ಬಾಹುಳ್ಯ ಪ್ರದೇಶಗಳಿಗೆ ಸಮೀಪದಲ್ಲಿದ್ದರೂ ಹೆಚ್ಚಿನ ಮುಸ್ಲಿಮರು ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿರುವುದು ಜೆಡಿಯುವಿಗೆ ದೊಡ್ಡ ಆಘಾತ ನೀಡಿದೆ.

``ಗರಿಷ್ಠ ಜನರು ಬರಲೆಂದು ಮಟನ್ ಬಿರಿಯಾನಿ ಕೂಡ ಸಿದ್ಧಪಡಿಸಿದ್ದೆವು. ಕೊನೆಗೆ ಸಿಕ್ಕಸಿಕ್ಕವರಿಗೆ ಮಟನ್ ಬಿರಿಯಾನಿ ನೀಡಿ ಖಾಲಿಗೊಳಿಸಲಾಯಿತು,'' ಎಂದು ಪಕ್ಷ ಕಾರ್ಯಕರ್ತರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜೆಡಿಯು ಸಂಘಟನಾ ಪ್ರಧಾನ ಕಾರ್ಯದರ್ಶಿ ಆರ್ ಸಿ ಪಿ ಸಿಂಗ್ ಅವರ ಭಾಷಣವನ್ನು ಭಾಗವಹಿಸಿದವರೊಬ್ಬರು ಅರ್ಧದಲ್ಲಿಯೇ ನಿಲ್ಲಿಸಿ ಎಂದು ಹೇಳಿದ ಪ್ರಸಂಗವೂ ನಡೆದಿದೆ. “ಬಸ್ ಹೋ ಗಯಾ ಅಬ್'' ಎಂದು ಸಭಿಕರೊಬ್ಬರು ಹೇಳಿದಾಗ ಅಲ್ಲಿ ನೆರೆದಿದ್ದ ಹಲವರು ತಮ್ಮ ಕುರ್ಚಿಗಳಿಂದ ಎದ್ದು ಹೊರ ಹೋಗಲು ಆರಂಭಿಸಿದರು. ಸಿಂಗ್ ತಮ್ಮ ಭಾಷಣ ಸ್ವಲ್ಪ ಹೊತ್ತು ಮುಂದುವರಿಸಿದರೂ ಊಟ ಆರಂಭಿಸುವ ಸಲುವಾಗಿ ಹಾಗೂ ಮುಜುಗರ ತಪ್ಪಿಸಲು ಭಾಷಣ ನಿಲ್ಲಿಸುವಂತೆ ಸಂಘಟಕರು ಅವರಿಗೆ ಮನವಿ ಮಾಡಿದರು.

``ಸಭೆಗೆ ಬರುವವರಿಗೆ ಸಾರಿಗೆ ವ್ಯವಸ್ಥೆ ಮಾಡದೇ ಇರುವುದು ಹಾಗೂ ಸಂಘಟನೆಯ ಕೊರತೆಯೇ ಕಡಿಮೆ ಜನರು ಭಾಗವಹಿಸಲು ಕಾರಣವೇ ಹೊರತು  ಬೇರೇನೂ ಇಲ್ಲ. ಪಕ್ಷ ಮುಸ್ಲಿಮರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಮಾಲ್ ನಿರ್ಮಿಸುವವರಿದ್ದರೂ ದಫನ ಭೂಮಿಗಳ ಸುತ್ತ ಬೇಲಿ ಹಾಕಿದವರು ನಾವು,'' ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News