ತಾರಕಾಸುರ: ಖಳ ಮಾತ್ರವಲ್ಲ, ಇಲ್ಲಿ ನಾಯಕನೂ ಅಸುರನೇ..!

Update: 2018-11-25 11:55 GMT

ಒಬ್ಬ ಯಶಸ್ವಿ ನಿರ್ದೇಶಕನಿಂದ ನಿರೀಕ್ಷಿಸುವ ಪ್ರೇಕ್ಷಕನ ಮನದಲ್ಲಿ ಹಿಂದಿನ ಚಿತ್ರದ ಶೈಲಿಯದೇ ಆಕಾಂಕ್ಷೆ ಇರುತ್ತದೆ. ಆ ನಿಟ್ಟಿನಲ್ಲಿ ತಮ್ಮ ‘ರಥಾವರ’ದ ಹಾಗೆ ಕ್ರೈಮ್, ಆ್ಯಕ್ಷನ್ ಮತ್ತು ಸಸ್ಪೆನ್ಸ್ ಜೊತೆಗೆ ಬಂದು ಬುದ್ಧಿವಂತರಾಗಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಎಲ್ಲ ಆ್ಯಕ್ಷನ್ ಚಿತ್ರಗಳ ಪ್ರಮಖ ಅಂಶ ಎಂಬಂತೆ ಇಲ್ಲಿಯೂ ನಾಯಕ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ. ಆದರೆ ಹಳ್ಳಿಯಿಂದ ನಗರಕ್ಕೆ ಬರಲು ಏನು ಕಾರಣ ಎನ್ನುವುದು ಆಮೇಲೆ ಫ್ಲ್ಯಾಶ್‌ಬ್ಯಾಕ್ ಮೂಲಕ ಅನಾವರಣವಾಗುತ್ತದೆ. ನಗರಕ್ಕೆ ಬಂದ ಕಾರ್ಬನ್ ಅನ್ನು ನಗರವಾಸಿಯಾಗಿಸುವಲ್ಲಿ ಮಂಚೇಗೌಡ ಎಂಬಾತ ಸಹಾಯ ಮಾಡುತ್ತಾನೆ. ಕಾರ್ಬನ್ ಗೆ ನಗರದಲ್ಲಿ ಮುತ್ತಮ್ಮ ಎನ್ನುವ ಸುಂದರಿಯೊಂದಿಗೆ ಏಕಮುಖ ಪ್ರೇಮವಾಗುತ್ತದೆ. ಆದರೆ ಕೊನೆಯಲ್ಲಿ ಆ ಪ್ರೇಮ ಏನಾಗುತ್ತದೆ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್. ವಿಶೇಷ ಏನೆಂದರೆ ಇದು ಚಿತ್ರದ ಒನ್ ಸೈಡ್ ಲುಕ್ ಮಾತ್ರ. ಚಿತ್ರ ಆರಂಭಗೊಳ್ಳುವುದೇ ಮರಳು ದಂಧೆಯ ಕಾಳಿಂಗನ ಆಗಮನದ ಮೂಲಕ. ಕಾಳಿಂಗನಿಗೂ ಕಾರ್ಬನ್‌ಗೂ ಹಳ್ಳಿಯಿಂದಲೇ ಒಂದು ಸಂಬಂಧ ಇರುತ್ತದೆ. ಅದು ಯಾವ ಸಂಬಂಧ? ಮತ್ತೆ ನಗರದಲ್ಲಿ ಅವರಿಬ್ಬರು ಎದುರಾಗುವುದು ಹೇಗೆ ಎನ್ನುವುದು ಚಿತ್ರದ ಮತ್ತೊಂದು ಮುಖ.

ತಾರಕಾಸುರ ಎನ್ನುವುದು ಪುರಾಣದ ರಾಕ್ಷಸನ ಹೆಸರು. ಆಧುನಿಕ ರಾಕ್ಷಸನಂತೆ ಭಯಾನಕ ಕಾಳಿಂಗನನ್ನು ತೋರಿಸಲಾಗಿದೆ. ಇದು ಬುಡಬುಡಿಕೆ ಜನಾಂಗದವರ ಕುರಿತಾದ ಚಿತ್ರ ಎಂದು ಮೊದಲೇ ಸುದ್ದಿಯಾಗಿತ್ತು. ಚಿತ್ರದಲ್ಲಿ ನಾಯಕ ನಡೆಸುವ ವಾಮಾಚಾರಗಳನ್ನು ಗಮನಿಸಿದರೆ ಇಷ್ಟಕ್ಕಾಗಿ ಬುಡಬುಡಿಕೆ ಜನಾಂಗವೇ ಅವಶ್ಯವೇ ಎಂಬ ಸಂದೇಹ ಬರುವುದು ಸಹಜ. ಯಾಕೆಂದರೆ ಅಘೋರಿಗಳ ಜೀವನ ಶೈಲಿಯನ್ನೇ ತೋರಿಸಿದಂತಿದೆ. ಆದರೆ ನಿರ್ದೇಶಕರು ತಾವು ಆ ಜನಾಂಗದ ಅಧ್ಯಯನ ನಡೆಸಿಯೇ ಈ ಕತೆ ಮಾಡಿದ್ದಾಗಿ ಹೇಳುವುದರಿಂದ ಚಿತ್ರದಲ್ಲಿನ ಗೂಬೆಗಳ ಹಾಗೆ ಪ್ರೇಕ್ಷಕರು ಎರಡೂ ಕಣ್ಣರಳಿಸಿಕೊಂಡು ಚಿತ್ರ ನೋಡುತ್ತ ಕೂರಬೇಕಾಗುತ್ತದೆ. ಹಾಗೆಯೇ ಚಿತ್ರದ ಶೀರ್ಷಿಕೆಯ ಪ್ರಕಾರ ಇದು ವಿಲನ್ ಓರಿಯೆಂಟೆಡ್ ಸಿನೆಮಾ ಎಂದು ಬಿಂಬಿಸುತ್ತಾ ಬಂದ ನಿರ್ದೇಶಕರು ಖಳನ ಜೊತೆಗೆ ನಾಯಕನಲ್ಲಿಯೂ ಇರುವ ಖಳಛಾಯೆಯನ್ನು ಹೊರಗಿಟ್ಟು ಬುದ್ಧಿವಂತ ಎನಿಸಿದ್ದಾರೆ.

ನವ ನಾಯಕರಾಗಿ ಚಿತ್ರರಂಗ ಪ್ರವೇಶಿಸಿರುವ ವೈಭವ್ ಕಾರ್ಬನ್ ಮತ್ತು ಕಾರ್ತಿಕೇಯ ಎನ್ನುವ ಪಾತ್ರಗಳ ಮೂಲಕ ಮೊದಲ ಚಿತ್ರದಲ್ಲೇ ಎರಡೆರಡು ಛಾಯೆಯ ಪ್ರದರ್ಶನಕ್ಕೆ ಅವಕಾಶ ಪಡೆದಿದ್ದಾರೆ.

ತಮ್ಮಿಂದಾಗುವ ಮಟ್ಟಿಗೆ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ನಡೆಸಿರುವುದು ಎದ್ದು ಕಾಣುತ್ತದೆ. ಪ್ರಥಮ ನೋಟಕ್ಕೆ ವೈಭವ್ ರಾಜಮೌಳಿ ನಿರ್ದೇಶನದ ‘ಮಗದೀರ’ ಚಿತ್ರದ ಖಳನಾಯಕ ದೇವ್‌ಗಿಲ್ರನ್ನು ನೆನಪಿಸುತ್ತಾರೆ. ಖಳನಾಯಕ ಬ್ರಿಟಿಷ್ ಕಲಾವಿದ ಡ್ಯಾನಿ ಸಪಾನಿಯನ್ನು ಕನ್ನಡದ ಕಾಳಿಂಗನಾಗಿ ಪರಿವರ್ತಿಸಿರುವ ರೀತಿಗೆ ನಿರ್ದೇಶಕರಿಗೆ ಹ್ಯಾಟ್ಸಾಫ್ ಸಲ್ಲಲೇಬೇಕು. ನಾಯಕಿ ಮುತ್ತಮ್ಮನಾಗಿ ಮಾನ್ವಿತಾ ನಟಿಸಿದ್ದಾರೆ. ಆಕೆಯ ಪಾತ್ರದ ಪ್ರಾಧಾನ್ಯತೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಿವೀಲಾಗುತ್ತದೆ. ಬುಡಬುಡಿಕೆ ತಾತನಾಗಿ ನಾಯಕನ ತಂದೆ ಸ್ಥಾನದಲ್ಲಿ ಕಾಣಿಸಿರುವ ಎಂ.ಕೆ ಮಠ ಎರಡು ಗೆಟಪ್ ನಲ್ಲಿ ಕಾಣಿಸುತ್ತಾರೆ. ಮತ್ತೋರ್ವ ಬುಡಬುಡಿಕೆ ತಾತನಾಗಿ ಕರಿಸುಬ್ಬು ನಟಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಿಗೆ ಒಂದು ಹಂತದಲ್ಲಿ ಅನಿರೀಕ್ಷಿತ ತಿರುವುಗಳನ್ನು ಸೃಷ್ಟಿಸಿ ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು. ಚಿತ್ರದ ಪಾಸಿಟಿವ್ ಅಂಶಗಳಲ್ಲಿ ಛಾಯಾಗ್ರಹಣ, ಎಡಿಟಿಂಗ್ ಮತ್ತು ಧರ್ಮವಿಶ್ ಅವರ ಹಿನ್ನೆಲೆ ಸಂಗೀತಕ್ಕೆ ಪ್ರಧಾನ ಪಾತ್ರವಿದೆ.

ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕುವಲ್ಲಿ ಕ್ರೌರ್ಯ ಮಾತ್ರವಲ್ಲ ದ್ವಂದ್ವಾರ್ಥದ ಸಂಭಾಷಣೆಗೂ ಪ್ರಧಾನ ಪಾತ್ರವಿದೆ ಎಂದು ಚಿತ್ರ ನೋಡಿದಾಗ ಗೊತ್ತಾಗುತ್ತದೆ.
ಮಂಚೇಗೌಡನಾಗಿ ಬರುವ ಸಾಧು ಕೋಕಿಲ ‘ಡಬಲ್ ಮೀನಿಂಗ್’ ಅಲ್ಲ ಎನ್ನುತ್ತಲೇ ಅಶ್ಲೀಲ ಸಂಭಾಷಣೆಗಳ ಸುರಿಮಳೆ ಸುರಿಸಿದ್ದಾರೆ.

ನಾಯಕ ನಗರವಾಸಿಯಾಗುವಲ್ಲಿನ ವೇಗ ಮತ್ತು ಬದಲಾಗುವ ರೀತಿ ಅರ್ಥ ಹೀನ ಎನ್ನುವಂತಿದೆ. ಇತರರಿಗೆ ಕನ್ನಡದ ಪಾಠ ಮಾಡುವ ನಾಯಕ ಹುಬ್ಬಳ್ಳಿಯ ನಾಯಕಿಯಲ್ಲೇಕೆ ಅಷ್ಟೊಂದು ಇಂಗ್ಲಿಷ್ ಮಾತನಾಡುತ್ತಾ ಕಾಲ ಕಳೆಯುತ್ತಾನೆ ಎನ್ನುವ ಪ್ರಶ್ನೆಗೆ ಉತ್ತರ ದೊರಕುವುದಿಲ್ಲ. ಆದರೆ ತಮ್ಮ ಮೇಕಿಂಗ್ ಶೈಲಿಯಿಂದ ಎಲ್ಲವನ್ನು ಮರೆಸುವಷ್ಟು ತಂತ್ರವನ್ನು ನಿರ್ದೇಶಕರು ಪ್ರದರ್ಶಿಸಿದ್ದಾರೆ. ತಪ್ಪುಎಷ್ಟೇ ಅಪರೂಪಕ್ಕೆ ಮಾಡಿದರೂ ಕೂಡ ತಿರುಗುಬಾಣವಾಗಿ ನಮ್ಮ ಮೇಲೆ ಎರಗುತ್ತದೆ ಎನ್ನುವ ನೀತಿಯ ಅಂಶ ಕತೆಯೊಂದಿಗೆ ನಮ್ಮನ್ನು ಸೇರುತ್ತದೆ. ಒಟ್ಟಿನಲ್ಲಿ ಚಿತ್ರ ನೋಡಿದ ಆ್ಯಕ್ಷನ್ ಪ್ರಿಯರು ಖುಷಿಯಾಗಿದ್ದಾರೆ.


ತಾರಾಗಣ: ವೈಭವ್, ಮಾನ್ವಿತಾ, ಸಾಧು ಕೋಕಿಲ
ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ.
ನಿರ್ಮಾಣ: ಎಂ. ನರಸಿಂಹಲು


Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News