ಕರ್ತಾರ್‌ಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭ: ಪಾಕ್ ಆಹ್ವಾನ ತಿರಸ್ಕರಿಸಿದ ಪಂಜಾಬ್ ಮುಖ್ಯಮಂತ್ರಿ

Update: 2018-11-25 14:56 GMT

ಚಂಡೀಗಢ, ನ.25: ಕರ್ತಾರ್‌ಪುರ ಕಾರಿಡಾರ್ ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ನೀಡಿರುವ ಆಹ್ವಾನವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ತಿರಸ್ಕರಿಸಿದ್ದಾರೆ.

ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಪಾಕ್ ಪ್ರೇರಿತ ಭಯೋತ್ಪಾದಕ ದಾಳಿ ಹಾಗೂ ಗಡಿಭಾಗದಲ್ಲಿ ಪಾಕಿಸ್ತಾನದ ಸೈನಿಕರು ಪದೇಪದೇ ಗುಂಡಿನ ದಾಳಿ ನಡೆಸಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿರುವುದರಿಂದ ಆ ದೇಶದ ಆಹ್ವಾನವನ್ನು ತಿರಸ್ಕರಿಸುವುದಾಗಿ ಸಿಂಗ್ ತಿಳಿಸಿದ್ದಾರೆ. ಇದೊಂದು ಐತಿಹಾಸಿಕ ಸಂದರ್ಭವಾಗಿದೆ. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು ಎಂದು ತಿಳಿಸಲು ವಿಷಾದಿಸುತ್ತೇನೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿಗೆ ಬರೆದಿರುವ ಪತ್ರದಲ್ಲಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.

 ಪಾಕ್ ಆಹ್ವಾನವನ್ನು ತಿರಸ್ಕರಿಸಲು ಎರಡು ಕಾರಣಗಳಿವೆ. ಮೊದಲನೆಯದಾಗಿ- ಜಮ್ಮು-ಕಾಶ್ಮೀರದ ಗಡಿನಿಯಂತ್ರಣಾ ರೇಖೆಯ ಬಳಿ ಭಾರತೀಯ ಯೋಧರು ಗಾಯಗೊಳ್ಳದ ಅಥವಾ ಸಾವನ್ನಪ್ಪದ ದಿನವೇ ಇಲ್ಲ ಎಂಬಂತಾಗಿದೆ. ಅಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳುವ ಬದಲು ದಿನೇ ದಿನೇ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಮತ್ತೊಂದು ಕಾರಣವೆಂದರೆ- ಪಾಕಿಸ್ತಾನದ ಐಎಸ್‌ಐ ಪಂಜಾಬ್‌ನಲ್ಲಿ ತನ್ನ ದುಷ್ಕೃತ್ಯಗಳನ್ನು ಆರಂಭಿಸಿದೆ. 2017ರ ಮಾರ್ಚ್‌ನಿಂದ 19 ಐಎಸ್‌ಐ ಬೆಂಬಲಿತ ದುಷ್ಕರ್ಮಿಗಳನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. 81 ಉಗ್ರರನ್ನು ಬಂಧಿಸಲಾಗಿದ್ದು 79 ಶಸ್ತ್ರಗಳನ್ನು, ಸುಧಾರಿತ ಸ್ಫೋಟಕ ಸಾಧನಗಳನ್ನು, ಪಾಕಿಸ್ತಾನದ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿರುವ ಹಲವಾರು ಎಚ್‌ಜಿ-84 ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ನವೆಂಬರ್ 28ರಂದು ಕತಾರ್‌ಪುರ ಕಾರಿಡಾರ್ ಯೋಜನೆಯ ಶಿಲಾನ್ಯಾಸವನ್ನು ಪಾಕ್ ಪ್ರಧಾನಿ ಇಮ್ರಾನ್‌ಖಾನ್ ನೆರವೇರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News