ಪ್ರಯೋಗಾಲಯಗಳಿಂದ ಬೀದಿಗಿಳಿದ ಸಂಶೋಧನಾರ್ಥಿಗಳು!

Update: 2018-11-26 18:32 GMT

ದೇಶದ ಉದ್ದಗಲಕ್ಕೂ ಸಂಶೋಧನಾರ್ಥಿಗಳು ತಮ್ಮ ಫೆಲೋಶಿಪ್‌ಸಹಾಯಧನವನ್ನು ಪರಿಷ್ಕರಿಸಬೇಕೆಂಬ ಬೇಡಿಕೆಯೊಂದಿಗೆ ಪ್ರತಿಭಟನೆಗಿಳಿದಿದ್ದಾರೆ. ಸಂಶೋಧನಾ ವಿದ್ವಾಂಸರಿಗೆ ಸಾಕಷ್ಟು ನೆರವು ನೀಡುವ ಮತ್ತು ಅದನ್ನು ಸಕಾಲದಲ್ಲಿ ವಿತರಿಸುವ ಹಳೆಯ ಸಮಸ್ಯೆ ಸರಳವಾಗಿ ಗುಣವಾಗುವಂತೆ ಕಾಣುತ್ತಿಲ್ಲ.

ನವೆಂಬರ್ 20ರಂದು ಈ ಸಂಶೋಧನಾರ್ಥಿಗಳು ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಅವರಿಗೆ ಮನವಿಯೊಂದನ್ನು ಸಲ್ಲಿಸಿ, ಹಲವು ಇತರ ಬೇಡಿಕೆಗಳ ಜೊತೆಗೆ ಮುಖ್ಯವಾಗಿ ತಮಗೆ ಸಿಗುವ ಸಹಾಯಧನವನ್ನು ತಕ್ಷಣ ಏರಿಸಬೇಕೆಂದು ಕೋರಿದ್ದರು.

ಅವರ ಆತಂಕವನ್ನು ಕೇಂದ್ರ ಸರಕಾರವು ಇತ್ತೀಚೆಗೆ ಪರಿಚಯಿಸಿರುವ ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್ (ಪಿಎಂಆರ್‌ಎಫ್) 2018 ಇನ್ನಷ್ಟು ಹೆಚ್ಚಿಸಿದೆ. ಈ ಪಿಎಂಆರ್‌ಎಫ್ ಯೋಜನೆಯು ಐಐಟಿ ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್, ಎಜುಕೇಶನ್ ಆ್ಯಂಡ್‌ರಿಸರ್ಚ್ (ಐಐಎಸ್‌ಇಆರ್)ನಲ್ಲಿ ಪಿ.ಎಚ್‌ಡಿಗಾಗಿ ಅಧ್ಯಯನ ನಡೆಸಲು ಬಯಸುವ ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಇದೆ. ಅವರಿಗೆ ಹೆಚ್ಚಿನ ಮೊತ್ತದ ಅಂದರೆ, ತಿಂಗಳಿಗೆ 70,000 ರೂ.ಗಳ ಸ್ಟೈಪೆಂಡ್ ನೀಡಲಾಗುತ್ತದೆ. ಇದು ಪ್ರಸ್ತುತ ಹಿರಿಯ ಸಂಶೋಧನಾರ್ಥಿಗಳಿಗೆ ನೀಡಲಾಗುತ್ತಿರುವ ಮಾಸಿಕ ರೂ. 28,000 ಮತ್ತು ಕಿರಿಯ ಸಂಶೋಧನಾರ್ಥಿಗಳಿಗೆ ನೀಡಲಾಗುತ್ತಿರುವ ಮಾಸಿಕ ರೂ. 25,000 ಸಹಾಯಧನಕ್ಕೆ ಹೋಲಿಸಿದಾಗ ಅಜಗಜಾಂತರವಿದೆ. ಪಿಎಚ್‌ಡಿ ವಿದ್ವಾಂಸರನ್ನು ಸರಕಾರಿ ನೌಕರರ ಶ್ರೇಣಿಗೆ ಸೇರಿಸುವ ಕುರಿತು ಪರಿಗಣಿಸಬೇಕೆಂದು ಈ ಮನವಿ ಹೇಳುತ್ತದೆ. ಇದರಿಂದ ಪ್ರತಿಯೊಂದು ವೇತನ ಆಯೋಗದ ಪರಿಷ್ಕರಣೆಯ ವೇಳೆ ನೆರವಿನ ಮೊತ್ತ ತನ್ನಿಂದತಾನೇ ಏರಲು ಅವಕಾಶವಾಗುತ್ತದೆ.
ಆದರೆ, ಈ ಸಂಶೋಧನಾರ್ಥಿಗಳು ಈ ಚಳವಳಿ ಆರಂಭಿಸುವುದಕ್ಕೆ ಮೊದಲೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ವಿಜಯರಾಘವನ್ ಹೇಳುತ್ತಾರೆ. ಇದು ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ತನ್ನದೆಂದು ಅವರ ಹೇಳಿಕೆ.

ದೇಶದ ಆರ್ಥಿಕ ಅಭಿವೃದ್ಧಿಯು ಸಂಶೋಧನೆ ಮತ್ತು ಅಭಿವೃದ್ಧಿಯ ಯತ್ನಗಳ ಜೊತೆ ನೇರವಾಗಿ ತಳಕುಹಾಕಿಕೊಂಡಿದೆ ಎಂಬುದನ್ನು ಸಂಶೋಧನಾರ್ಥಿಗಳ ಮನವಿ ಒತ್ತಿಹೇಳುತ್ತದೆ. ಇದಕ್ಕಾಗಿ ಹೆಚ್ಚೆಚ್ಚು ವಿಜ್ಞಾನಿಗಳು ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾಗಲು ವಿದ್ಯಾರ್ಥಿಗಳಿಗೆ ನೀಡಲಾಗುವ ಸಹಾಯಧನ ಆಕರ್ಷಕವಾಗಿರಬೇಕಾಗಿದ್ದರೂ, ಇತರ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಮಾಡಲಾಗುವಂತೆ ಸಂಶೋಧಕರ ಸಂಬಳವನ್ನು ನಿಯಮಿತವಾಗಿ ಪರಿಷ್ಕರಿಸಲಾಗುತ್ತಿಲ್ಲ ಎಂಬುದು ಮನವಿಯ ಮುಖ್ಯಾಂಶ.

ಅದು ವಿಶ್ವ ಬ್ಯಾಂಕಿನ ಅಂಕಿಅಂಶಗಳನ್ನೂ ಉಲ್ಲೇಖಿಸುತ್ತದೆ. ಅದರ ಪ್ರಕಾರ ಭಾರತದಲ್ಲಿ 2015ರಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 215 ಸಂಶೋಧಕರಿದ್ದರು. ಇದು 1996ರಲ್ಲಿದ್ದ 152ಕ್ಕೆ ಹೋಲಿಸಿದರೆ 42 ಶೇಕಡಾ ಏರಿಕೆ ಕಂಡಿದೆ. ಅದರೆ ಇದೇ ಅವಧಿಯಲ್ಲಿ ಚೀನಾದಲ್ಲಿ ಈ ಸಂಖ್ಯೆ 438ರಿಂದ 1,176ಕ್ಕೆ ಅಂದರೆ, 168 ಶೇಕಡಾ ಏರಿದೆ.

ಸಂಶೋಧನಾ ಸಹಾಯಧನ ಏರಿಕೆಯಿಂದ ಈ ವೃತ್ತಿ ಇನ್ನಷ್ಟು ಆಕರ್ಷಕ ವಾಗಿ ಭಾರತದ ಸಂಶೋಧನಾ ಫಲಿತಾಂಶವು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಹೆಚ್ಚಬಹುದು ಎಂದು ಅರ್ಜಿಯ ಪ್ರತಿಪಾದನೆ.

ಭಾರತದಲ್ಲಿ ಸಂಶೋಧನಾ ಸಹಾಯಧನವನ್ನು ಯೋಜಿಸುವ ಮತ್ತು ನಿರ್ಧರಿಸುವ ಹಲವಾರು ಸಂಸ್ಥೆಗಳನ್ನು ಮನವಿಯಲ್ಲಿ ಹೆಸರಿಸಲಾಗಿದ್ದು, ಅವುಗಳಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ, ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್), ಮತ್ತು ವಿಶ್ವವಿದ್ಯಾನಿಲಯ ಅನುದಾನ ಮಂಡಳಿ (ಯುಜಿಸಿ) ಸೇರಿವೆ. ಅವರ ಬೇಡಿಕೆಗಳೆಂದರೆ: ಕಿರಿಯ ಸಂಶೋಧಕರ ನೆರವನ್ನು ಮಾಸಿಕ ರೂ. 50,000ಕ್ಕೂ, ಹಿರಿಯ ಸಂಶೋಧಕರ ನೆರವನ್ನು ಮಾಸಿಕ ರೂ. 56,000ಕ್ಕೂ ಮಧ್ಯಂತರವಾಗಿ ಏರಿಸಬೇಕು; ನಂತರ ಏಳನೇ ವೇತನ ಆಯೋಗಕ್ಕೆ ಅನುಗುಣವಾಗಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಸಹಾಯಧನವನ್ನು ಪರಿಷ್ಕರಿಸಬೇಕು; ಸಂಶೋಧನಾರ್ಥಿಗಳಿಗೆ ಸಕಾಲದಲ್ಲಿ ಅದನ್ನು ವಿತರಿಸಬೇಕು.

ಸಂಶೋಧನಾರ್ಥಿಗಳ ರಾಷ್ಟ್ರೀಯ ಪ್ರತಿನಿಧಿ ನಿಖಿಲ್ ಗುಪ್ತಾ ಅವರ ಪ್ರಕಾರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು 2015ರಲ್ಲಿಯೇ ನಿಯಮಿತವಾಗಿ ಸಹಾಯಧನ ಪರಿಷ್ಕರಿಸುವ ಭರವಸೆ ನೀಡಿತ್ತು. ಗುಪ್ತಾ ಅವರು ಲಕ್ನೋದ ಸೆಂಟರ್ ಫಾರ್ ಬಯೋಮೆಡಿಕಲ್ ರಿಸರ್ಚ್ ಸಂಸ್ಥೆಯಲ್ಲಿ ಸಂಶೋಧನಾರ್ಥಿ.

ಹಲವು ವರ್ಷಗಳಿಂದ ಸಂಶೋಧನಾ ಸಹಾಯಧನದಲ್ಲಿ ಏರುಪೇರಾಗಿದೆ. 1999ರಲ್ಲಿ ಅದು ರೂ. 5,000, 2006ರಲ್ಲಿ ರೂ. 8,000-10,000, 2007ರಲ್ಲಿ 12,000-14,000, 2010ರಲ್ಲಿ 16,000-18,000, 2014ರಲ್ಲಿ 25,000-28,000 ರೂ. ಇತ್ತು. ಇದಕ್ಕೆ ಒಂದು ನಿರ್ದಿಷ್ಟ ಮಾನದಂಡವಿಲ್ಲ.
ಪ್ರತಿಭಟಿಸುತ್ತಿರುವ ಸಂಶೋಧನಾರ್ಥಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳು ಈ ರೀತಿ ಇವೆ.

ಸರಕಾರ ತನ್ನ ನೌಕರರ ವಿಷಯದಲ್ಲಿ ಮಾಡುವಂತೆ ಸ್ವಯಂ ಆಗಿ ಸಹಾಯಧನವನ್ನು ನಿಯಮಿತವಾಗಿ ಪರಿಷ್ಕರಿಸಬೇಕು. ನಾವು ಬೇರೆ ದಾರಿಯೇ ಇಲ್ಲದೆ ಬೀದಿಗಿಳಿಯುವಂತೆ ಮಾಡಬಾರದು.

ಈಗಿನ ಸಹಾಯಧನದಿಂದ ಮಹಾನಗರಗಳಲ್ಲಿ ಬದುಕುವುದು ಕಷ್ಟ. ಕೆಲವು ಸಂಶೋಧನಾರ್ಥಿಗಳಿಗೆ ಸಹಾಯಧನವು ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳುಗಳ ನಂತರ ಸಿಗುತ್ತಿದೆ. ಅವರು ಪ್ರತೀ ಸೆಮಿಸ್ಟರ್ ನಲ್ಲಿ ಬೋಧನಾ ಶುಲ್ಕ ಪಾವತಿಸುವುದು, ಯೋಜನೆಗಳನ್ನು ಮುಗಿಸುವುದು, ದೈನಂದಿನ ಜೀವನ ವೆಚ್ಚವನ್ನು ನಿರ್ವಹಿಸುವುದು ಹೇಗೆ?

ಹಣದುಬ್ಬರ ಒತ್ತಟ್ಟಿಗಿರಲಿ; ಬೋಧನಾ ಶುಲ್ಕ, ಊಟದ ಖರ್ಚು, ಪ್ರಯಾಣ ವೆಚ್ಚ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ತಗಲುವ ಖರ್ಚು... ಇತ್ಯಾದಿಗಳನ್ನು ಜೇಬಿನಿಂದ ಭರಿಸಬೇಕಾಗಿದೆ ಎಂಬುದು ಅವರ ಅಳಲು.

ಹೆಚ್ಚಿನ ಸಂಶೋಧನಾರ್ಥಿಗಳು 26-34ರ ವಯೋಮಿತಿಯಲ್ಲಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಅವರ ಮಾನಸಿಕ ಸ್ಥೈರ್ಯ ಕುಸಿಯಲಿದೆ. ಎಳೆಯ ವಯಸ್ಸಿನ ವಿಜ್ನಾನಿಗಳಲ್ಲಿ ಉತ್ಪಾದಕತೆ ಹೆಚ್ಚೆಂದು ಅಧ್ಯಯನಗಳು ಹೇಳುತ್ತವೆ. ಇದರಿಂದ ದೇಶದ ಸಂಶೋಧನಾ ಮಟ್ಟದಲ್ಲಿ ಗಮನಾರ್ಹ ಕುಸಿತ ಉಂಟಾಗಬಹುದು ಎಂದೂ ಮನವಿಯಲ್ಲಿ ಹೇಳಲಾಗಿದೆ.

ಪ್ರತೀ ತಿಂಗಳು ಪಾವತಿ ಮಾಡುವ ಸಲುವಾಗಿ 2016ರಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲಾಗಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗಲೂ ಕೆಲವರಿಗೆ ವರ್ಷಕ್ಕೊಮ್ಮೆ ಒಂದೇ ಬಾರಿ ಸಹಾಯಧನ ಸಿಗುತ್ತಿದೆ ಎಂದೂ ಮನವಿಯಲ್ಲಿ ದೂರಲಾಗಿದೆ.

ಸಂಶೋಧನಾರ್ಥಿಗಳು ದೂರಿರುವ ಇನ್ನೊಂದು ವಿಷಯ ಎಂದರೆ ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್ ತಮ್ಮಲ್ಲೇ ತಾರತಮ್ಯ ಉಂಟುಮಾಡುತ್ತದೆ. ಒಂದೇ ರೀತಿಯ ಸಂಶೋಧನೆ ಮಾಡುವವರಲ್ಲಿ ತಾರತಮ್ಯ ಏಕೆ ಎಂಬುದು ಅವರ ಪ್ರಶ್ನೆ.

ಆದರೆ, ಈ ಯೋಜನೆಯು ಸಂಶೋಧನಾ ವೃತ್ತಿಯನ್ನು ಹೆಚ್ಚು ಆಕರ್ಷಕವಾಗಿಸುವ ಅಗತ್ಯವನ್ನು ತೋರಿಸಿಕೊಡುತ್ತದಾದರೂ, ಸರಕಾರ ಅದರ ಅನುಷ್ಠಾನದಲ್ಲಿ ಮೊದಲ ವರ್ಷದಲ್ಲೇ ಎಡವಿದೆ. 2018ರಲ್ಲಿ ಕೇವಲ 135 ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆದಿದ್ದಾರೆ ಎಂದು ‘ದಿವೈರ್’ ವರದಿ ಮಾಡಿದೆ.

ಅದಲ್ಲದೇ ಶುದ್ಧ ವಿಜ್ಞಾನಕ್ಕೆ ಎದುರಾಗಿ ಆನ್ವಯಿಕ ವಿಜ್ಞಾನದ ಪರವಾಗಿ ತಾರತಮ್ಯ ತೋರಲಾಗುತ್ತಿದ್ದು, ಸಾವಿರಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಅಕ್ಟೋಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಪರಿಸ್ಥಿತಿ ಬದಲಾಗಿಲ್ಲ ಎಂದು ಹೇಳುವ ನಿಖಿಲ್ ಗುಪ್ತಾ, ‘‘ಹೀಗಾದಲ್ಲಿ ವೈಜ್ಞಾನಿಕ ಪ್ರತಿಭೆಗಳು ವಿದೇಶಗಳತ್ತ ಮುಖಮಾಡಬಹುದು’’ ಎನ್ನುತ್ತಾರೆ. ಈ ಬಾರಿಯಾದರೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬ ಭರವಸೆ ಅವರದ್ದು.


ಕೃಪೆ: thewire

Writer - ಟಿ. ವಿ. ಪದ್ಮ

contributor

Editor - ಟಿ. ವಿ. ಪದ್ಮ

contributor

Similar News