ನೀವು ಪ್ರಕರಣ ನಿಭಾಯಿಸಿದ ರೀತಿ ನಾಚಿಕೆಗೇಡು: ನಿತೀಶ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2018-11-27 07:49 GMT

ಹೊಸದಿಲ್ಲಿ, ನ.27: ರಾಜ್ಯದ ಆಶ್ರಯತಾಣಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಪ್ರಕರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಬಿಹಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೆ ಆರೋಪಿಗಳ ವಿರುದ್ಧ ಸರಕಾರ ಮೃದು ನಿಲುವು ತಳೆದಿದೆ ಎಂದು ಆರೋಪಿಸಿದೆ.

ಆಶ್ರಯತಾಣಗಳ ಕೆಲ ಮಕ್ಕಳನ್ನು ಅನೈಸರ್ಗಿಕ ಲೈಂಗಿಕ ಕ್ರಿಯೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ತಿಳಿದು ಬಂದ ನಂತರವೂ ಪೊಲೀಸರು ಸೆಕ್ಷನ್ 377 ಅನ್ವಯ ಪ್ರಕರಣ ದಾಖಲಿಸದೇ ಇರುವುದನ್ನು ತಿಳಿದು ಆಕ್ರೋಶಗೊಂಡ ಜಸ್ಟಿಸ್ ಮದನ್ ಬಿ ಲೋಕೂರ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ರಾಜ್ಯ ಸರಕಾರ ಈ ಪ್ರಕರಣಗಳನ್ನು ನಿಭಾಯಿಸಿದ ರೀತಿ ನಾಚಿಕೆಗೇಡು ಎಂದು ಹೇಳಿತು.

ಎಫ್‍ ಐಆರ್ ಕೂಡ ದಾಖಲಿಸದೆ, ಬಂಧನಗಳನ್ನು ಕೂಡ ನಡೆಸದೇ ಇರುವುದರಿಂದ ರಾಜ್ಯದ ಪೊಲೀಸರು ಈ ಹೇಯ ಅಪರಾಧ ಪ್ರಕರಣದ ತನಿಖೆ ನಡೆಸಿದರೆ ಸತ್ಯ ಹೊರಬರುವ ಸಾಧ್ಯತೆಯೇ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

ಮುಝಫ್ಫರಪುರ್ ಆಶ್ರಯ ತಾಣದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುತ್ತಿರುವುದರಿಂದ ಇತರ ಅಶ್ರಯ ತಾಣಗಳ ಪ್ರಕರಣಗಳನ್ನೂ ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ನ್ಯಾಯಾಲಯ ಹೇಳಿತು.

ಸಿಬಿಐ ಎಲ್ಲಾ ಪ್ರಕರಣಗಳ ತನಿಖೆ ನಡೆಸುವುದೇ ಎಂಬ ಬಗ್ಗೆ ನಾಳೆಯೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸಿಬಿಐ ವಕೀಲರಿಗೆ ಈ ಸಂದರ್ಭ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News