ರೈತರ ಮೇಲೆ ನೋಟು ನಿಷೇದದ ಪರಿಣಾಮ: ಉಲ್ಟಾ ಹೊಡೆದ ಕೃಷಿ ಸಚಿವಾಲಯ

Update: 2018-11-27 09:49 GMT

 ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧದ ಪರಿಣಾಮ ಕುರಿತು ಕಳೆದ ವಾರ ಸಂಸದೀಯ ಸಮಿತಿಗೆ ವರದಿಯೊಂದನ್ನು ಸಲ್ಲಿಸಿದ್ದ ಕೇಂದ್ರ ಕೃಷಿ ಸಚಿವಾಲಯವು ಈಗ ತಿಪ್ಪರಲಾಗ ಹಾಕಿದೆ.

ಮೂಲಗಳು ಹೇಳುವಂತೆ ಚಳಿಗಾಲದ ಬೆಳೆಗಳಿಗಾಗಿ ಸಕಾಲದಲ್ಲಿ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸುವಲ್ಲಿ ಲಕ್ಷಾಂತರ ರೈತರ ವೈಫಲ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದ ನೋಟು ನಿಷೇಧವೇ ಕಾರಣವಾಗಿತ್ತೆಂದು ಕೃಷಿ ಸಚಿವಾಲಯವು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದ ವರದಿಯಲ್ಲಿ ದೂರಿತ್ತು. ವರದಿಯ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿಗೆ ಸೇರಿದ ಸಮಿತಿಯ ಸದಸ್ಯರು,ವರದಿಯು ಕೃಷಿ ಕಾರ್ಯದರ್ಶಿಗಳ ಹಿಂಬರಹವನ್ನು ಹೊಂದಿಲ್ಲ,ಹೀಗಾಗಿ ಅದು ಸೂಕ್ತ ವರದಿಯಲ್ಲ ಎಂದು ಪ್ರತಿಪಾದಿಸಿದ್ದರು.

ವರದಿಯು ಕೈಸೇರಿದ ಬೆನ್ನಿಗೇ ಅದನ್ನು ಟ್ವಿಟರ್‌ನಲ್ಲಿ ಪ್ರಶಂಸಿಸಿದ್ದ ಮೊಯ್ಲಿ, ‘‘ಇದು ನೋಟು ನಿಷೇಧವು ಲಕ್ಷಾಂತರ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು ’’ ಎನ್ನುವುದಕ್ಕೆ ಅಧಿಕೃತ ಒಪ್ಪಿಗೆಯಾಗಿದೆ ಎಂದು ಹೇಳಿದ್ದರು.

 ಆದರೆ ಇಂದು ನಡೆಯಲಿರುವ ಸಂಸದೀಯ ಸಮಿತಿಯ ಸಭೆಯಲ್ಲಿ ಕೃಷಿ ಸಚಿವಾಲಯವು ಹೊಸ ವರದಿಯೊಂದನ್ನು ಸಲ್ಲಿಸುತ್ತಿದೆ. ಈ ವರದಿಯ ಕರಡು ಪ್ರತಿ ಇಂಡಿಯಾ ಟುಡೇ  ಟಿವಿ ವಾಹಿನಿಗೆ ಲಭ್ಯವಾಗಿದೆ. ‘‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕೃಷಿಸಾಲದ ಒದಗಣೆ,ಗುಣಮಟ್ಟದ/ಪ್ರಮಾಣೀಕೃತ ಬೀಜಗಳ ವಿತರಣೆ,ಪ್ರಮುಖ ಹಿಂಗಾರು ಬೆಳೆಗಳ ಕೃಷಿಕ್ಷೇತ್ರದ ವಿಸ್ತರಣೆ ಮತ್ತು ಇಳುವರಿಯಲ್ಲಿ ಉತ್ತೇಜನಕಾರಿ ಬೆಳವಣಿಗೆೆ ಕಂಡುಬಂದಿದೆ ’’ಎಂದು ಹೊಸ ವರದಿಯು ಹೇಳಿದೆ. ‘‘ಸರಕಾರವು ಕೈಗೊಂಡ ಕ್ರಮಗಳಿಂದಾಗಿ ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧದಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ ಮತ್ತು ಅದರಿಂದ ರೈತರಿಗೆ ಲಾಭವೇ ಆಗಿದೆ ’’ ಎನ್ನುವುದನ್ನು ಇದು ಸೂಚಿಸುತ್ತಿದೆ.

  ಹಳೆಯ ವರದಿ ಮತ್ತು ಹೊಸ ವರದಿ

 ಹೊಸ ವರದಿಯು ಕೃಷಿ ಸಚಿವಾಲಯವು ಕಳೆದ ವಾರ ಸಲ್ಲಿಸಿದ್ದ ವರದಿಗೆ ತದ್ವಿರುದ್ಧವಾಗಿದೆ. ರೈತರು ತಮ್ಮ ಮುಂಗಾರು ಬೆಳೆಗಳ ಮಾರಾಟ ಮತ್ತು ಹಿಂಗಾರು ಬೆಳೆಗಳ ಕೃಷಿಗೆ ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲಿಯೇ ನೋಟು ನಿಷೇಧವನ್ನು ಘೋಷಿಸಲಾಗಿತ್ತು. ಮಾರಾಟ ಮತ್ತು ಬೀಜ ಬಿತ್ತನೆ ಕಾರ್ಯಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಹಣದ ಅಗತ್ಯವಿದ್ದಾಗಲೇ ನೋಟು ನಿಷೇಧದಿಂದಾಗಿ ಮಾರುಕಟ್ಟೆಯಲ್ಲಿ ನಗದು ಹಣ ಮಾಯವಾಗಿತ್ತು ಎಂದು ಮೊದಲಿನ ವರದಿಯು ತಿಳಿಸಿತ್ತು.

‘‘ ನಗದು ಹಣವನ್ನು ಪಡೆಯಲು ಅಸಮರ್ಥರಾಗಿದ್ದ ಲಕ್ಷಾಂತರ ರೈತರಿಗೆ ಹಿಂಗಾರು ಬೆಳೆಗಳಿಗಾಗಿ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ. ಭೂಮಾಲಿಕರು ಕಾರ್ಮಿಕರಿಗೆ ದಿನಗೂಲಿಯನ್ನು ಪಾವತಿಸಲು ಅಥವಾ ಕೃಷಿಗೆ ಅಗತ್ಯವಾದ್ದನ್ನು ಖರೀದಿಸುವಲ್ಲಿ ವಿಫಲರಾಗಿದ್ದರು ಎಂದು ಮೊದಲ ವರದಿಯು ತಿಳಿಸಿತ್ತು’’ ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಮಿತಿಯಲ್ಲಿನ ಪ್ರತಿಪಕ್ಷ ಸದಸ್ಯರು ಹೇಳಿದರು.

ಗೋದಿ ಬೀಜಗಳ ಖರೀದಿಗಾಗಿ ನಿಷೇಧಿತ 1,000 ಮತ್ತು 500 ರೂ.ಗಳ ನೋಟುಗಳನ್ನು ಬಳಸಲು ಅವಕಾಶ ನೀಡಿದ್ದ ಸರಕಾರದ ಕ್ರಮವು ತುಂಬ ವಿಳಂಬವಾಗಿತ್ತು ಮತ್ತು ರಾಷ್ಟ್ರೀಯ ಬೀಜ ನಿಗಮ(ಎನ್‌ಎಸ್‌ಸಿ)ದಿಂದ ಗೋದಿ ಬೀಜಗಳ ಮಾರಾಟದಲ್ಲಿ ಸುಮಾರು 1.3 ಲಕ್ಷ ಕ್ವಿಂಟಲ್ ಕುಸಿತವಾಗಿತ್ತು ಎಂದು ಹಿಂದಿನ ವರದಿಯು ತಿಳಿಸಿತ್ತು.

ಈ ವರದಿಯು ಹಿಂದಿನ ವಾರ ನಡೆದಿದ್ದ ಸ್ಥಾಯಿ ಸಮಿತಿಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿತ್ತು ಮತ್ತು ವರದಿಯನ್ನು ಮಂಡಿಸಲು ಕೃಷಿ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿರದ್ದರಿಂದ ಕೆರಳಿದ್ದ ಸಮಿತಿ ಸದಸ್ಯರು ಕೃಷಿ ಸಚಿವಾಲಯದ ಅಧಿಕಾರಿಗಳ ತಂಡದ ಹೇಳಿಕೆಗಳನ್ನು ಕೇಳಲು ಸಿದ್ಧರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂದಿನ ಸಭೆಗೆ ಮುನ್ನ ದೊರೆತ ಒಂದು ವಾರದ ಅವಧಿಯನ್ನು ಕೃಷಿಸಚಿವಾಲಯವು ನೋಟು ನಿಷೇಧವನ್ನು ಟೀಕಿಸಿದ್ದ ಮತ್ತು ಸರಕಾರಕ್ಕೆ ಮುಜುಗರವನ್ನುಂಟು ಮಾಡಿದ್ದ ಅಂಶಗಳನ್ನು ತೆಗೆದುಹಾಕಲು ಬಳಸಿಕೊಂಡಿದೆ.

 ಹೊಸ ವರದಿಯಲ್ಲಿ ನೋಟು ನಿಷೇಧದಿಂದ ಕೃಷಿರಂಗಕ್ಕೆ ಹಾನಿಯಾಗದಂತೆ ಕ್ರಮಗಳನ್ನು ಕೈಗೊಳ್ಳಲು ಕೇಂದ್ರವು ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿತ್ತು. ಬೀಜಗಳ ಮಾರಾಟ,ಬೆಳೆ ಉತ್ಪಾದನೆಯ ಮೇಲೆ ನೋಟು ನಿಷೇಧದಿಂದ ಯಾವುದೇ ಪ್ರತಿಕೂಲ ಪರಿಣಾಮವುಂಟಾಗಿಲ್ಲ. 2015-16(ನೋಟುನಿಷೇಧಕ್ಕೆ ಮುನ್ನ)ರಲ್ಲಿ ಒಟ್ಟು 612.28 ಲ.ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ,2016-17ರಲ್ಲಿ ಇದು 635.29 ಲ.ಹೆ.ಮತ್ತು 2017-18ರಲ್ಲಿ 628.25 ಲ.ಹೆ.ಆಗಿದೆ. ಇದೇ ಅವಧಿಗಳಲ್ಲಿ ಬೆಳೆ ಉತ್ಪಾದನೆ ಅನುಕ್ರಮವಾಗಿ 1264.5 ಲ.ಟನ್,1367.75 ಲ.ಟನ್ ಮತ್ತು 1441.12 ಲ.ಟನ್ ಆಗಿದೆ. ಗೋದಿ ಬೀಜಗಳ ಖರೀದಿಗೆ ರೈತರು ಹಳೆಯ ನೋಟುಗಳನ್ನು ಬಳಸಲು ಅವಕಾಶ ನೀಡಿದ್ದರಿಂದ ಬೀಜಗಳ ಮಾರಾಟದ ಮೇಲೆ ನೋಟು ನಿಷೇಧದ ಪರಿಣಾಮವುಂಟಾಗಿರಲಿಲ್ಲ. ನೋಟು ನಿಷೇಧದಿಂದಾಗಿ 2016 ಸೆಪ್ಟಂಬರ್ ಮತ್ತು ದಿಸೆೆಂಬರ್ ನಡುವೆ ಮಾರುಕಟ್ಟೆಗೆ ಭತ್ತ,ಹತ್ತಿ,ಈರುಳ್ಳಿ ಮತ್ತು ಸೋಯಾಗಳ ಆವಕಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಿರಲಿಲ್ಲ, ಬೆಳೆಗಳ ಬೆಲೆಗಳ ಮೇಲೂ ನೋಟು ನಿಷೇಧವು ಪರಿಣಾಮವನ್ನುಂಟು ಮಾಡಿರಲಿಲ್ಲ ಮತ್ತು ರೈತರಿಗೆ ನಗದು ಲಭ್ಯತೆಗೆ ಕೊರತೆಯಾಗಿರಲಿಲ್ಲ ಎಂಬಿತ್ಯಾದಿ ಧನಾತ್ಮಕ ಅಂಶಗಳನ್ನೇ ಪಟ್ಟಿ ಮಾಡಲಾಗಿದೆ.

ವರದಿಯನ್ನು ಸರಕಾರದ ಮೂಗಿನ ನೇರಕ್ಕೆ ತಿದ್ದುಪಡಿ ಮಾಡುವ ಮೂಲಕ ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರು ಹಿಂದಿನ ವರದಿಯು ಮಾಡಿದ್ದ ಹಾನಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ.

 ‘ನೋಟು ನಿಷೇಧದಿಂದ ಯಾವುದೇ ದುಷ್ಪರಿಣಾಮಗಳಾಗಿಲ್ಲ’ ಎಂಬ ತನ್ನ ಸರಕಾರದ ಹೇಳಿಕೆಯ ಬಂಡವಾಳವನ್ನು ಬಯಲುಗೊಳಿಸಿದ್ದ ವರದಿಗಾಗಿ ಸ್ವಪಕ್ಷೀಯರ ತೀವ್ರ ಕ್ರೋಧಕ್ಕೆ ಗುರಿಯಾಗಿದ್ದ ಸಿಂಗ್ ಶುಕ್ರವಾರ ನೋಟು ನಿಷೇಧವು ರೈತರಿಂದ ಬೀಜಗಳ ಖರೀದಿಗೆ ಅಡ್ಡಿಯನ್ನುಂಟುಮಾಡಿತ್ತು ಎಂಬ ವರದಿಗಳನ್ನು ಅಲ್ಲಗಳೆಯಲು ಪ್ರಯತ್ನಿಸಿದ್ದರು.

 ನೋಟು ನಿಷೇಧ ಕುರಿತು ವರದಿಯನ್ನು ಸಂಪೂರ್ಣವಾಗಿ ಬದಲಿಸಿರುವುದಕ್ಕಾಗಿ ಕೃಷಿ ಸಚಿವಾಲಯವನ್ನು ಗುರಿಯಾಗಿಸಿಕೊಳ್ಳಲು ಸಮಿತಿಯಲ್ಲಿನ ಪ್ರತಿಪಕ್ಷ ಸದಸ್ಯರು ಸಜ್ಜಾಗಿದ್ದಾರೆ. ಬಿಜೆಪಿ ಸದಸ್ಯರು ಮೊದಲಿನ ವರದಿಯನ್ನು ತಿರಸ್ಕರಿಸಿದ್ದ ರೀತಿಯಲ್ಲಿಯೇ ಹೊಸ ವರದಿಯನ್ನು ತಿರಸ್ಕರಿಸಲು ಪ್ರತಿಪಕ್ಷ ಸದಸ್ಯರು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.

Similar News