ಕೋಚ್ ರಮೇಶ್ ಪೊವಾರ್‌ರಿಂದ ಅವಮಾನವಾಗಿದೆ: ಮಿಥಾಲಿ ರಾಜ್ ಆರೋಪ

Update: 2018-11-27 13:14 GMT

ಹೊಸದಿಲ್ಲಿ, ನ.27: ‘‘ಅಧಿಕಾರದಲ್ಲಿರುವ ಕೆಲವು ವ್ಯಕ್ತಿಗಳು ನನ್ನನ್ನು ಅವಮಾನಿಸಿ, ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ’’ ಎಂದು ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯೆ ಡಿಯಾನಾ ಎಡುಲ್ಜಿ ಹಾಗೂ ಕೋಚ್ ರಮೇಶ್ ಪೊವಾರ್ ವಿರುದ್ಧ ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಕಿಡಿಕಾರಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ತನ್ನನ್ನು ಹೊರಗಿಟ್ಟಿರುವ ಕುರಿತಂತೆ ಕೊನೆಗೂ ವೌನ ಮುರಿದ ಮಿಥಾಲಿ ರಾಜ್, ಎಡುಲ್ಜಿ ತನ್ನ ಅಧಿಕಾರದ ಬಲದಿಂದ ತನ್ನನ್ನು ಆಡುವ ಬಳಗದಿಂದ ಹೊರಗಿಡಲು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.

35ರ ಹರೆಯದ ಮಿಥಾಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಸತತ ಅರ್ಧಶತಕಗಳನ್ನು ಸಿಡಿಸಿದ್ದರೂ ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ಅವರನ್ನು ಕೈಬಿಡಲಾಗಿತ್ತು. 8 ವಿಕೆಟ್‌ಗಳಿಂದ ಸೋತಿದ್ದ ಪಂದ್ಯದಲ್ಲಿ ಮಿಥಾಲಿಯವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿರುವುದು ಎಲ್ಲರಿಗೂ ಅಚ್ಚರಿ ತಂದಿತ್ತು.

‘‘20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ನಾನು ಉತ್ಸಾಹ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದೇನೆ. ಅಧಿಕಾರದಲ್ಲಿರುವ ಕೆಲವರು ನನಗೆ ಅವಮಾನಿಸಿ, ಆತ್ಮವಿಶ್ವಾಸಕ್ಕೆ ಕುಂದುತಂದಿರುವುದರಿಂದ ದೇಶಕ್ಕೆ ನಾನು ನೀಡಿರುವ ಸೇವೆಗೆ ಬೆಲೆಯಿಲ್ಲವೇ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ನನ್ನನ್ನು ಆಡುವ 11ರ ಬಳಗದಿಂದ ಹೊರಗಿಡುವ ನಿರ್ಧಾರಕ್ಕೆ ಬೆಂಬಲ ನೀಡಿರುವ ಟ್ವೆಂಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೇಲೆ ನನಗೆ ಯಾವುದೇ ಕೋಪವಿಲ್ಲ. ದೇಶಕ್ಕೆ ವಿಶ್ವಕಪ್ ಗೆದ್ದುಕೊಡಬೇಕೆಂಬ ಬಯಕೆ ನನಗಿತ್ತು. ಆದರೆ, ಅವಕಾಶ ಕಳೆದುಕೊಂಡಿದ್ದಕ್ಕೆ ತುಂಬಾ ನೋವಾಗುತ್ತಿದೆ’’ ಎಂದು ಮಿಥಾಲಿ ಹೇಳಿದ್ದಾರೆ.

‘‘ನಾನು ಕೋಚ್ ಬಳಿ ಏನಾದರೂ ಸಲಹೆ ಕೇಳಲು ಹೋದರೆ ಅವರು ಮೊಬೈಲ್ ಫೋನ್ ನೋಡುತ್ತಾರೆ. ಅಥವಾ ಕೇಳಿಸದಂತೆ ಮುಂದಕ್ಕೆ ಸಾಗುತ್ತಾರೆ. ಇದು ಮುಜುಗರದ ವಿಚಾರ. ನನಗೆ ಅವಮಾನವಾಗಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ನಾನು ಈತನಕ ತಾಳ್ಮೆಯನ್ನು ಕಳೆದುಕೊಂಡಿಲ್ಲ’’ ಎಂದು ಮಿಥಾಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News