26/11ರ ನ್ಯಾಯದ ಹೋರಾಟದಲ್ಲಿ ಭಾರತದ ಜೊತೆಗೆ ಅಮೆರಿಕ: ಟ್ರಂಪ್

Update: 2018-11-27 16:47 GMT

ವಾಶಿಂಗ್ಟನ್, ನ. 27: ಹತ್ತು ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ನ್ಯಾಯ ಪಡೆಯುವ ಭಾರತದ ಹೋರಾಟದಲ್ಲಿ ಅಮೆರಿಕವು ಅದರ ಪರವಾಗಿ ನಿಲ್ಲುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

 ಸೋಮವಾರ ಸಂಜೆ ಮಾಡಿದ ಟ್ವೀಟ್‌ನಲ್ಲಿ ಟ್ರಂಪ್ ಪಾಕಿಸ್ತಾನವನ್ನು ಹೆಸರಿಸಿಲ್ಲ. ಆದರೆ, ಇದಕ್ಕೂ ಮುಂಚೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ವಿದೇಶಾಂಗ ಇಲಾಖೆಯಲ್ಲಿರುವ ಭಯೋತ್ಪಾದನೆ ನಿಗ್ರಹ ಪರಿಣತ ನತಾನ್ ಸೇಲ್ಸ್, ತಪ್ಪಿತಸ್ಥರನ್ನು ಪಾಕಿಸ್ತಾನ ಶಿಕ್ಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದರು.

ಪಾಕಿಸ್ತಾನದ ಬಗ್ಗೆ ಕಠಿಣ ನಿಲುವನ್ನು ತಳೆದಿರುವ ಟ್ರಂಪ್, ಮುಂಬೈ ದಾಳಿಯ ವಿಷಯದಲ್ಲೂ ದೃಢ ನಿಲುವನ್ನು ವ್ಯಕ್ತಪಡಿಸಿದ್ದಾರೆ.

‘‘ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ 10ನೇ ವಾರ್ಷಿಕ ದಿನದಂದು, ತಪ್ಪಿತಸ್ಥರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸುವ ಭಾರತದ ಜನತೆಯ ಹೋರಾಟದಲ್ಲಿ ಅಮೆರಿಕವೂ ಅವರ ಜೊತೆ ನಿಲ್ಲುತ್ತದೆ. ಭಯೋತ್ಪಾದಕರು ಗೆಲ್ಲಲು ಅಥವಾ ಗೆಲುವಿನ ಸಮೀಪಕ್ಕೆ ಬರಲೂ ನಾವು ಬಿಡುವುದಿಲ್ಲ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಗಳು, ಪ್ರಚೋದನೆ ನೀಡಿದವರು, ನೆರವು ನೀಡಿದವರು ಮತ್ತು ಅದನ್ನು ಮಾಡಿದವರ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್ (ಸುಮಾರು 35 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಸೋಮವಾರ ಇದಕ್ಕೂ ಮೊದಲು ಅಮೆರಿಕ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

 2008 ನವೆಂಬರ್ 26ರಿಂದ 29ರವರೆಗೆ ನಾಲ್ಕು ದಿನಗಳ ಕಾಲ ನಡೆದ ಭೀಕರ ದಾಳಿಯಲ್ಲಿ, ಪಾಕಿಸ್ತಾನದ ಲಷ್ಕರೆ ತಯ್ಯಿಬ ಭಯೋತ್ಪಾದಕ ಸಂಘಟನೆಯ 10 ಉಗ್ರರು ಮುಂಬೈಯಲ್ಲಿ ರಕ್ತದ ಕೋಡಿಯನ್ನು ಹರಿಸಿದ್ದರು. 166 ಮಂದಿ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

10 ಭಯೋತ್ಪಾದಕರ ಪೈಕಿ ಒಂಬತ್ತು ಮಂದಿಯನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಓರ್ವನನ್ನು ಜೀವಂತವಾಗಿ ಹಿಡಿಯಲಾಗಿತ್ತು. ಅವನನ್ನು 2012 ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು.

ಸೂತ್ರಧಾರರನ್ನು ಪಾಕಿಸ್ತಾನ ಶಿಕ್ಷಿಸಬೇಕು: ಇಸ್ರೇಲ್

ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ದೊರೆಯುವುದನ್ನು ಖಾತರಿಪಡಿಸುವಂತೆ ಇಸ್ರೇಲ್ ಪಾಕಿಸ್ತಾನವನ್ನು ಒತ್ತಾಯಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 166 ಮಂದಿಯ ಪೈಕಿ ಆರು ಮಂದಿ ಇಸ್ರೇಲ್ ಪ್ರಜೆಗಳು.

ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರರು ಮತ್ತು ಸಂಘಟಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಜವಾಬ್ದಾರಿಯಾಗಿದೆ ಎಂದು ಇಸ್ರೇಲ್‌ನ ವಿದೇಶ ವ್ಯವಹಾರಗಳ ಸಚಿವಾಲಯದ ಹಿರಿಯ ರಾಜತಾಂತ್ರಿಕ ಮೈಕಲ್ ರೋನನ್ ಹೇಳಿದರು.

ಭಯೋತ್ಪಾದಕ ದಾಳಿಯ 10ನೇ ವಾರ್ಷಿಕ ದಿನದಂದು ಟೆಲ್ ಅವೀವ್‌ನಲ್ಲಿ ಸೋಮವಾರ ಭಾರತೀಯ ರಾಯಭಾರ ಕಚೇರಿ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News