ಮಕ್ಕಳ ಜೀನ್ ಬದಲಾವಣೆ: ತನಿಖೆಗೆ ಚೀನಾ ಆದೇಶ

Update: 2018-11-27 16:56 GMT

ಬೀಜಿಂಗ್, ನ. 27: ವಂಶವಾಹಿ (ಜೀನ್) ತಿದ್ದಲ್ಪಟ್ಟ ಜಗತ್ತಿನ ಮೊದಲ ಅವಳಿಗಳನ್ನು ಸೃಷ್ಟಿಸಿದ್ದೇನೆ ಎಂಬುದಾಗಿ ಶೆಂಝನ್‌ನ ವಿಜ್ಞಾನಿ ಹೆ ಜಿಯಾಂಕುಯಿ ನೀಡಿರುವ ಹೇಳಿಕೆ ಬಗ್ಗೆ ಚೀನಾ ತನಿಖೆಗೆ ಆದೇಶ ನೀಡಿದೆ.

ಚೀನಾ ವಿಜ್ಞಾನಿಯ ಹೇಳಿಕೆ ಬಗ್ಗೆ ವೈಜ್ಞಾನಿಕ ಸಮುದಾಯದಿಂದ ಅಪನಂಬಿಕೆ ಹಾಗೂ ಟೀಕೆ ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ. ಅದೂ ಅಲ್ಲದೆ, ಮಾನವ ಬದುಕಿನ ರೀತಿಯನ್ನೇ ಬದಲಾಯಿಸುವ ಸಾಮರ್ಥ್ಯವುಳ್ಳ ಈ ಸಂಶೋಧನೆಯು ಗಂಭೀರ ನೈತಿಕತೆಯ ಪ್ರಶ್ನೆಯನ್ನೂ ಎತ್ತಿದೆ.

ಈ ಹೆಣ್ಣು ಅವಳಿಗಳು ಏಡ್ಸ್ ರೋಗಕ್ಕೆ ನಿರೋಧತೆ ಹೊಂದಿದ್ದಾರೆ ಎಂಬುದಾಗಿ ವಿಜ್ಞಾನಿಯನ್ನು ಉಲ್ಲೇಖಿಸಿ ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಪ್ರಯೋಗ ಮತ್ತು ಹೆ ಜಿಯಾಂಕುಯಿ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಾನು ಸೂಚನೆ ನೀಡಿರುವುದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ತಿಂಗಳ ಆದಿ ಭಾಗದಲ್ಲಿ ಜನಿಸಿದ ಅವಳಿ ಮಕ್ಕಳ ಸಿಸಿಆರ್5 ಜೀನನ್ನು ‘ಸಿಆರ್‌ಐಎಸ್‌ಪಿಆರ್’ ಎಂಬ ವಂಶವಾಹಿ ತಂತ್ರಜ್ಞಾನದ ಮೂಲಕ ತನ್ನ ತಂಡ ಯಶಸ್ವಿಯಾಗಿ ಬದಲಾಯಿಸಿದೆ ಎಂಬುದಾಗಿ ಹೆ ಜಿಯಾಂಕುಯಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News