ಮಂಗಳ ಗ್ರಹದಲ್ಲಿ ಯಶಸ್ವಿಯಾಗಿ ಇಳಿದ ಶೋಧಕ ನೌಕೆ ‘ಇನ್‌ಸೈಟ್’

Update: 2018-11-27 16:58 GMT

ಪ್ಯಾಸಡೆನ (ಅಮೆರಿಕ), ನ. 27: ಮಂಗಳ ಗ್ರಹದ ಮೇಲ್ಮೈಯ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ಬಾಹ್ಯಾಕಾಶ ನೌಕೆ ‘ಇನ್‌ಸೈಟ್’ ಸೋಮವಾರ ಕೆಂಪು ಗ್ರಹದ ನೆಲದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಭಾರತೀಯ ಕಾಲಮಾನ ರಾತ್ರಿ ಸುಮಾರು 1:30ಕ್ಕೆ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹದಲ್ಲಿ ಇಳಿದಾಗ ಲಾಸ್ ಏಂಜಲಿಸ್ ಸಮೀಪದ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯ (ಜೆಪಿಎಲ್)ದ ಇಂಜಿನಿಯರ್‌ಗಳು ಸಂಭ್ರಮ ಆಚರಿಸಿದರು.

ಇದಾದ ನಿಮಿಷಗಳ ಬಳಿಕ, ಜೆಪಿಎಲ್ ನಿಯಂತ್ರಣ ಕೊಠಡಿಗೆ ಮಂಗಳ ಗ್ರಹದಲ್ಲಿ ಇಳಿದಿರುವ ನೌಕೆಯು ‘ಸೆಲ್ಫಿ’ ಚಿತ್ರವೊಂದನ್ನು ಕಳುಹಿಸಿತು. ಈ ಚಿತ್ರದಲ್ಲಿ ಕೆಂಪು ಗ್ರಹದ ಹಿನ್ನೆಲೆಯಿದೆ. ನೌಕೆಯ ಒಂದು ಕಾಲು ಬಂಡೆಯೊಂದರ ಪಕ್ಕದಲ್ಲಿ ಇರುವುದು ಚಿತ್ರದಲ್ಲಿ ಕಾಣುತ್ತದೆ.

ಆರು ತಿಂಗಳ ಅವಧಿಯಲ್ಲಿ 54.8 ಕೋಟಿ ಕಿ.ಮೀ. ದೂರ ಕ್ರಮಿಸಿದ ಬಳಿಕ ಇನ್‌ಸೈಟ್ ಮಂಗಳ ಗ್ರಹದಲ್ಲಿ ಇಳಿದಿದೆ. ಇದು ಒಂದು ಬಿಲಿಯ ಡಾಲರ್ (ಸುಮಾರು 7,080 ಕೋಟಿ ರೂಪಾಯಿ) ವೆಚ್ಚದ ಯೋಜನೆಯಾಗಿದೆ.

ಬಾಹ್ಯಾಕಾಶ ನೌಕೆಯನ್ನು ಮೇ ತಿಂಗಳಲ್ಲಿ ಕ್ಯಾಲಿಫೋರ್ನಿಯದಿಂದ ಉಡಾಯಿಸಲಾಗಿತ್ತು.

ಗ್ರಹಗಳು ಹೇಗೆ ರೂಪುಗೊಂಡವು ಎಂಬ ರಹಸ್ಯವನ್ನು ಅರಸುತ್ತಾ...

ಇನ್‌ಸೈಟ್ ಮುಂದಿನ 24 ತಿಂಗಳಲ್ಲಿ (ಮಂಗಳ ಗ್ರಹದ ಸುಮಾರು 1 ವರ್ಷ) ಮಾಹಿತಿ ಕಲೆಹಾಕುತ್ತಾ ಕೆಂಪು ಗ್ರಹದ ತುಂಬೆಲ್ಲಾ ಪ್ರಯಾಣಿಸುತ್ತದೆ. ಮಂಗಳ ಗ್ರಹ ಹೇಗೆ ರೂಪುಗೊಂಡಿತು ಹಾಗೂ ಒಟ್ಟಾರೆಯಾಗಿ ಒಳ ಸೌರ ಮಂಡಲದ ಭೂಮಿ ಮತ್ತು ಇತರ ಕಲ್ಲು ಬಂಡೆಗಳ ಗ್ರಹಗಳು ಹೇಗೆ ರೂಪುಗೊಂಡವು ಎಂಬ ರಹಸ್ಯವನ್ನು ಭೇದಿಸಲು ಅಗತ್ಯವಾದ ಮಾಹಿತಿಗಳನ್ನು ಅದು ಕಲೆಹಾಕಬಹುದು ಎಂಬ ವಿಶ್ವಾಸವನ್ನು ವಿಜ್ಞಾನಿಗಳು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News