ಮಧ್ಯಪ್ರದೇಶ, ಮಿಝೋರಾಂನಲ್ಲಿ ಮತದಾನ ಆರಂಭ

Update: 2018-11-28 03:37 GMT

ಭೋಪಾಲ್, ನ.28: 2019ರ ಸಾರ್ವತ್ರಿಕ ಚುನಾವಣೆಗೆ ಮೊದಲು ನಡೆಯುವ ಸೆಮಿಫೈನಲ್ ಎಂದೇ ಬಿಂಬಿಸಲಾಗಿರುವ ನಾಲ್ಕು ರಾಜ್ಯಗಳ ಚುನಾವಣೆ ಅಂಗವಾಗಿ ಮಧ್ಯಪ್ರದೇಶ ಮತ್ತು ಮಿಝೋರಾಂ ರಾಜ್ಯಗಳಲ್ಲಿ ಇಂದು ಮುಂಜಾನೆಯಿಂದ ಮತದಾನ ಆರಂಭವಾಗಿದೆ.

ಮಧ್ಯಪ್ರದೇಶದಲ್ಲಿ ಸತತ ಮೂರು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಕಾಂಗ್ರೆಸ್ ಈ ಬಾರಿ ತೀವ್ರ ಸ್ಪರ್ಧೆ ಒಡ್ಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮತದಾನಕ್ಕೆ ಮುನ್ನ ನರ್ಮದಾ ನದಿ ದಂಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಿಝೋರಾಂನಲ್ಲಿ ಒಟ್ಟು 40 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 209 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ಹಾಗೂ ಎಂಎಎನ್‌ಎಫ್ ಕ್ರಮವಾಗಿ 39 ಹಾಗೂ 40 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈಶಾನ್ಯ ರಾಜ್ಯಗಳ ಪೈಕಿ ಕಾಂಗ್ರೆಸ್ ಕೈಯಲ್ಲಿರುವ ಏಕೈಕ ರಾಜ್ಯ ಇದಾಗಿರುವುದರಿಂದ ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಕಾಂಗ್ರೆಸ್ 229 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಶರದ್ ಯಾದವ್ ನೇತೃತ್ವದ ಎಲ್‌ಜೆಡಿ ಪಕ್ಷಕ್ಕೆ ಟಿಕಂಘರ್ ಜಿಲ್ಲೆಯ ಜತಾರಾ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಬಿಎಸ್ಪಿ ಕೂಡಾ ಇಲ್ಲಿ ಸ್ಪರ್ಧೆಯಲ್ಲಿದ್ದರೂ, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News