ಭಾರತೀಯ ಕಂಪೆನಿ ಡೆಟೆಲ್ ನಿಂದ ವಿಶ್ವದ ಅತ್ಯಂತ ಅಗ್ಗದ ಎಲ್‌ಸಿಡಿ ಟಿವಿ ಬಿಡುಗಡೆ
ಹೊಸದಿಲ್ಲಿ, ನ.28: ಮೊಬೈಲ್ ಸೆಟ್ ವಹಿವಾಟಿನಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಂಪೆನಿ ಡೆಟೆಲ್, ಮಂಗಳವಾರ ವಿಶ್ವದ ಅತ್ಯಂತ ಅಗ್ಗದ ಎಲ್‌ಸಿಡಿ ಟಿವಿ ಬಿಡುಗಡೆ ಮಾಡಿದೆ ಎಂದು ಹೇಳಿಕೊಂಡಿದೆ. ಕೇವಲ 3,999 ರೂಪಾಯಿ ಬೆಲೆಯ ಹೊಸ ಡೆಟೆಲ್ ಡಿ1 ಎಲ್‌ಸಿಟಿ ಟಿವಿ 19 ಇಂಚಿನ ಎ+ ದರ್ಜೆಯ ಪ್ಯಾನೆಲ್ ಹೊಂದಿದೆ ಎಂದು ಕಂಪೆನಿ ಪ್ರಕಟಿಸಿದೆ.
ಇದು ಎಚ್‌ಡಿಎಂಐ ಪೋಟ್ ಹಾಗೂ ಯುಎಸ್‌ಬಿ ಪೋರ್ಟ್‌ಗಳನ್ನೂ ಹೊಂದಿದೆ. ಇತರ ಟಿವಿಗಳಂತೆ ಡೆಟೆಲ್ ಡಿ1 ಟಿವಿಯನ್ನು ಕೂಡಾ ಸೂಕ್ತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಕಂಪ್ಯೂಟರ್ ಪರದೆಯಾಗಿ ಬಳಸಬಹುದಾಗಿದೆ. ಈ ವರ್ಷಾರಂಭದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಕಂಪೆನಿ 24 ಇಂಚಿನಿಂದ ಆರಂಭವಾಗಿ 65 ಇಂಚಿನ ಪ್ಯಾನೆಲ್‌ಗಳನ್ನು ಹೊಂದಿದ ಏಳು ಎಲ್‌ಇಡಿ ಟಿವಿಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಡೆಟೆಲ್ ಡಿ1 ಎಲ್‌ಸಿಡಿ ಟಿವಿಯ ಗರಿಷ್ಠ ಮಾರಾಟ ಬೆಲೆ 4,999 ರೂಪಾಯಿ ಆಗಿದ್ದರೂ, ಭಾರತದಲ್ಲಿ ಇದು 3,999 ರೂಪಾಯಿಗೆ ಲಭ್ಯ. ಹೊಸ ಟಿವಿಯನ್ನು ಡೆಟೆಲ್ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಖರೀದಿಸಬಹುದಾಗಿದೆ. ವಿತರಕರು ಮತ್ತು ಪಾಲುದಾರರು ಈ ಉತ್ಪನ್ನವನ್ನು B2BAdda.com ಮೂಲಕ ಖರೀದಿಸಬಹುದು.
ವಿಶೇಷಗಳೇನು?
ಡೆಟೆಲ್ ಡಿ1 ಎಲ್‌ಸಿಡಿ ಟಿವಿ 19 ಇಂಚಿನ ಪರದೆಯನ್ನು ಹೊಂದಿದ್ದು, 1366/768 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 300000: 1 ಕಾಂಟ್ರಾಸ್ಟ್ ಅನುಪಾತ ಹೊಂದಿದೆ. ಇದು ಎ+ ಗ್ರೇಡ್ ಪ್ಯಾನಲ್ ಎನ್ನುವುದು ಕಂಪೆನಿಯ ಹೇಳಿಕೆ. ಎರಡು ಫ್ರಂಟ್ ಫೈರಿಂಗ್ 12 ವ್ಯಾಟ್ ಸ್ಪೀಕರ್‌ಗಳಿದ್ದು, ಇದು ಸ್ಪಷ್ಟ ಹಾಗೂ ಸುಲಲಿತ ಆಡಿಯೊ ಖಾತ್ರಿಪಡಿಸುತ್ತದೆ. ಟಿವಿ ಪವರ್ ಆಡಿಯೊ ಕಂಟ್ರೋಲ್ ಹಾಗೂ ಮೊದಲೇ ಅಳವಡಿಸಲಾದ ಗೇಮ್‌ಗಳನ್ನು ಕೂಡಾ ಹೊಂದಿದೆ.