ಆರರ ಬಾಲೆಗೆ ವಿವಾಹ: ಮುಕ್ತಿ ಪಡೆಯಲು ಹನ್ನೆರಡು ವರ್ಷ !

Update: 2018-11-29 04:12 GMT

ಜೋಧಪುರ, ನ. 29: ಆರನೇ ವಯಸ್ಸಿನಲ್ಲೇ ವಿವಾಹವಾಗಿದ್ದ ಬಾಲವಧುವೊಬ್ಬಳು ಹನ್ನೆರಡು ವರ್ಷಗಳ ಸುಧೀರ್ಘ ಹೋರಾಟದ ಬಳಿಕ ವಿವಾಹ ಬಂಧನದಿಂದ ಮುಕ್ತವಾದ ರೋಚಕ ಘಟನೆ ಬೆಳಕಿಗೆ ಬಂದಿದೆ.

ಕೂಲಿ ಕಾರ್ಮಿಕನೊಬ್ಬನ ಮಗಳು ಪಿಂಟುದೇವಿ (18) ಈ ಕಥೆಯ ನಾಯಕಿ. ಇಲ್ಲಿನ ಕುಟುಂಬ ನ್ಯಾಯಾಲಯ, ಈಕೆಯ ವಿವಾಹವನ್ನು ಮಂಗಳವಾರ ಅನೂರ್ಜಿತಗೊಳಿಸಿದಲ್ಲಿಗೆ ಕಥೆ ಸುಖಾಂತ್ಯವಾಗಿದೆ.

ಪಿಂಟುದೇವಿಯ ಬಾವಂದಿರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಪಿಂಟುದೇವಿ ವಿಚ್ಛೇದನಕ್ಕೆ ಆಗ್ರಹಿಸಿದಾಗ, ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಕೊನೆಗೂ ಸಾರಥಿ ಟ್ರಸ್ಟ್ ಎಂಬ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕಿ ಕೀರ್ತಿ ಭಾರತಿ ಎಂಬವರ ಸಹಾಯದಿಂದ ಕಾನೂನಾತ್ಮಕವಾಗಿ ಈ ವಿವಾಹ ಬಂಧನದಿಂದ ಬಿಡುಗಡೆ ಪಡೆಯುವುದು ಸಾಧ್ಯವಾಗಿದೆ. ಸರಣ್‌ನಗರದ ಯುವಕನ ಜತೆಗೆ ಆಗಿದ್ದ ತನ್ನ ವಿವಾಹವನ್ನು ರದ್ದುಪಡಿಸುವಂತೆ ಕೋರಿ ಕಳೆದ ಜೂನ್‌ನಲ್ಲಿ ಈ ಯುವತಿ ಅರ್ಜಿ ಸಲ್ಲಿಸಿದ್ದರು.

"ಕೀರ್ತಿ ದೀದಿಯ ಸಹಾಯದಿಂದ ಬಾಲ್ಯವಿವಾಹ ಸಂಕೋಲೆಯಿಂದ ನಾನು ಮುಕ್ತಿ ಪಡೆದಿದ್ದೇನೆ. ಇದೀಗ ನನ್ನ ಕನಸು ನನಸುಗೊಳಿಸಲು ನಾನು ಓದು ಮುಂದುವರಿಸುತ್ತೇನೆ" ಎಂದು ಪಿಂಟುದೇವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News