ಇವಿಎಂ ಸಹಿತ ಖಾಸಗಿ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಚುನಾವಣಾ ಸಿಬ್ಬಂದಿ

Update: 2018-11-29 05:23 GMT

ಶಾಜಾಪುರ್ (ಮಧ್ಯಪ್ರದೇಶ), ನ. 29: ಇಲ್ಲಿನ ಶುಜಲ್ಪುರ ಎಂಬಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಖಾಸಗಿ ಹೋಟೆಲ್ ಒಂದರಲ್ಲಿ ಇವಿಎಂ ಸಹಿತ ಚುನಾವಣಾ ಸಾಮಗ್ರಿಗಳ ಜೊತೆ ಸಿಕ್ಕಿಬಿದ್ದಿರುವ ವೀಡಿಯೊಗಳು ವೈರಲ್ ಆಗಿವೆ.

ಈ ವೀಡಿಯೊಗಳ ಬಗ್ಗೆ 'ವಾರ್ತಾಭಾರತಿ' ನಂಬಲರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, ಈ ಆಘಾತಕಾರಿ ಘಟನೆ ನಡೆದಿರುವುದು ಹೌದು ಎಂದು ತಿಳಿದುಬಂದಿದೆ.

ಇಲ್ಲಿನ ಶುಜಲ್ಪುರ್ ಎಂಬಲ್ಲಿನ ರಾಜಮಹಲ್ ಹೋಟೆಲ್ ನಲ್ಲಿ ಚಿತ್ರೀಕರಿಸಿರುವ ಈ ವೀಡಿಯೊ ದಲ್ಲಿ ಕೆಲವರು ಹೋಟೆಲ್ ರೂಮ್ ಗಳಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ ಸಹಿತ ಇತರ ಚುನಾವಣಾ ಸಾಮಗ್ರಿಗಳ ಜೊತೆ ಉಳಿದುಕೊಂಡಿರುವುದು ಕಂಡು ಬರುತ್ತದೆ. ಚುನಾವಣಾಧಿಕಾರಿ ಹಾಗು ಚುನಾವಣಾ ಆಯೋಗದ ಆದೇಶಕ್ಕೆ ವಿರುದ್ಧವಾಗಿ ಈ ಸಿಬ್ಬಂದಿ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದಲ್ಲಿ  ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು ಮತದಾನದ ಹಿಂದಿನ ದಿನ ಈ ಘಟನೆ ನಡೆದಿದೆ. ಈ ಸಂಬಂಧ ಸೋಹನ್ ಲಾಲ್ ಎಂಬ ಚುನಾವಣಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಹಾಗು ಆ ಜಾಗಕ್ಕೆ ಹೊಸ ತಂಡವನ್ನು ನಿಯೋಜಿಸಲಾಗಿದೆ ಎಂದು ವಾರ್ತಾಭಾರತಿಗೆ ಖಚಿತ ಮಾಹಿತಿ ಸಿಕ್ಕಿದೆ.

ಸಿಬ್ಬಂದಿ ಅಕ್ರಮವಾಗಿ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಬಿಜೆಪಿ ನಾಯಕರ ಮಾಲಕತ್ವದ್ದು ಎಂದು ಹೇಳಲಾಗಿದ್ದು ಇದು ಇನ್ನೂ ಖಚಿತವಾಗಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News