ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ
ಹೈದರಾಬಾದ್, ನ.29: ನಗರದ ಜನನಿಬಿಡ ಪ್ರದೇಶವಾದ ನಯಾಪೌಲ್ ಸಮೀಪದ ಮೀರ್ ಚೌಕ್ ಎಂಬಲ್ಲಿ ಗುರುವಾರ ವ್ಯಕ್ತಿಯೊಬ್ಬ ಆಟೋ ಚಾಲಕನನ್ನು ಕತ್ತಿಯಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ಈ ಬರ್ಬರ ಕೊಲೆಯ ವಿಡಿಯೋ ಕೂಡ ಹರಿದಾಡುತ್ತಿದೆ.
ಹಾಡಹಗಲೇ ನಡೆದ ಈ ಕೃತ್ಯವನ್ನು ಹಲವರು ನೋಡುತ್ತಾ ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸುತ್ತಿರುವುದೂ ವೀಡಿಯೋದಲ್ಲಿ ಕಾಣಿಸುತ್ತದೆ. ಆದರೆ ಅಲ್ಲಿ ನೆರೆದವರ್ಯಾರೂ ಆರೋಪಿಯನ್ನು ತಡೆಯಲು ಪ್ರಯತ್ನಿಸಿಲ್ಲ. ಇನ್ನೊಂದು ವೀಡಿಯೋದಲ್ಲಿ ಕೊಲೆಗೈದ ವ್ಯಕ್ತಿಯ ಬಟ್ಟೆಯೆಲ್ಲಾ ರಕ್ತದಲ್ಲಿ ತೊಯ್ದು ಹೋಗಿರುವುದು ಕಾಣಿಸುತ್ತದೆಯಲ್ಲದೆ ಮೃತದೇಹದ ಬಳಿ ಕುಳಿತು ಆತನಿಗೆ ತಕ್ಕ ಶಾಸ್ತಿಯಾಯಿತು ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಕೊಲೆ ಆರೋಪಿ 29 ವರ್ಷದ ಅಬ್ದುಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆಟೋ ಮಾಲಕನಾಗಿರುವ ಆತ ತನ್ನ ಆಟೋರಿಕ್ಷಾವನ್ನು ಬೇರೆಯವರಿಗೆ ಬಾಡಿಗೆಗೆ ನೀಡುತ್ತಿದ್ದ. ಆತನಿಗೂ ಆಟೋ ಚಾಲಕ ಶಾಕೀರ್ ಖುರೇಷಿ (30) ಜಗಳವಾಗಿತ್ತೆನ್ನಲಾಗಿದ್ದು, ಈ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಗೀಡಾದ ಆಟೋ ಚಾಲಕನ ಮೃತದೇಹವನ್ನು ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಕಳೆದ ತಿಂಗಳು ನಗರದ ಅತ್ತರಪುರ್ ಪ್ರದೇಶದ ರಾಜೇಂದ್ರ ನಗರದಲ್ಲಿ ಇಬ್ಬರು ವ್ಯಕ್ತಿಗಳ ಇನ್ನೊಬ್ಬನನ್ನು ಬೆಂಬತ್ತಿ ಕೊಡಲಿಯಿಂದ ಕೊಚ್ಚಿ ಸಾಯಿಸಿದ ಘಟನೆ ಕೂಡ ಹಾಡಹಗಲೇ ನಡೆದಿತ್ತು.