ಕಡ್ಡಾಯ ಆನ್‍ಲೈನ್ ನೋಂದಣಿ ಜಾರಿ ಮುಂದೂಡಿಕೆ: ನಾನ್-ಇಸಿಆರ್ ಪಾಸ್‍ಪೋರ್ಟ್ ಹೊಂದಿರುವವರು ನಿರಾಳ

Update: 2018-11-29 13:01 GMT

ಹೊಸದಿಲ್ಲಿ, ನ.29: ಹಲವಾರು ಅನಿವಾಸಿ ಭಾರತೀಯರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯವು `ನಾನ್ ಇಮಿಗ್ರೇಶನ್ ಚೆಕ್ ರಿಕ್ವೈರ್ಡ್ (ನಾನ್-ಇಸಿಆರ್) ಪಾಸ್‍ಪೋರ್ಟ್‍ಗಳನ್ನು ಹೊಂದಿದವರಿಗೆ ಕಡ್ಡಾಯಗೊಳಿಸಿದ್ದ ಆನ್‍ಲೈನ್ ನೋಂದಣಿ ಪ್ರಕ್ರಿಯೆ ಜಾರಿಯನ್ನು ಮುಂದೂಡಿದೆ. ಆರು ಗಲ್ಫ್ ರಾಷ್ಟ್ರಗಳ ಸಹಿತ ಒಟ್ಟು 18 ದೇಶಗಳಿಗೆ ತೆರಳುವವರು ನಾನ್-ಇಸಿಆರ್ ಪಾಸ್‍ಪೋರ್ಟ್ ಹೊಂದಿದ್ದರೆ ಸರಕಾರಿ ವೆಬ್ ತಾಣದಲ್ಲಿ ನೋಂದಾಯಿಸುವುದನ್ನು ಈ ಹಿಂದೆ ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತಲ್ಲದೆ ಜನವರಿ 1ರಂದು ಈ ಆದೇಶ ಜಾರಿಗೆ ಬರುವುದೆಂದು ತಿಳಿಸಿತ್ತು.

ಬೇರೆ ದೇಶಗಳಿಗೆ ಉದ್ಯೋಗಕ್ಕೆಂದು ತೆರಳುವವರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗುವುದೆಂದು ಸರಕಾರ ತಿಳಿಸಿತ್ತು. ಆದಾಯ ತೆರಿಗೆ ಪಾವತಿಸುವವರು ಹಾಗೂ ಮೆಟ್ರಿಕ್ಯುಲೇಶನ್‍ ಗಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವವರು  ನಾನ್-ಇಸಿಆರ್ ಪಾಸ್‍ಪೋರ್ಟ್ ಹೊಂದಿದವರಾಗಿದ್ದಾರೆ.

ಸದ್ಯ ಇಸಿಆರ್ ಪಾಸ್‍ಪೋರ್ಟ್ ಹೊಂದಿದವರು ಮಾತ್ರ ವಿದೇಶಗಳಿಗೆ ಉದ್ಯೋಗಕ್ಕೆ ತೆರಳುವ ಸಂದರ್ಭ ಇಮಿಗ್ರೇಶನ್ ಅನುಮತಿ ಪಡೆಯಬೇಕಿದೆ. ಸರಕಾರ ತನ್ನ ಆದೇಶದಲ್ಲಿ ಸೂಚಿಸಿದಂತೆ www. emigrate.gov.in ವೆಬ್ ತಾಣದಲ್ಲಿ ನೋಂದಣಿಗೊಳಿಸಲು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಈಗಾಗಲೇ ಇಸಿಆರ್ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾನ್-ಇಸಿಆರ್ ಪಾಸ್‍ಪೋರ್ಟ್ ಹೊಂದಿದವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದ್ದಾರೆನ್ನಲಾಗಿದೆ. ವಿವಿಧ ದೇಶಗಳಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಿಗೂ ಇಂತಹುದೇ ಸಮಸ್ಯೆ ವಿವರಿಸಿ ಮನವಿಗಳು ಬಂದಿವೆ ಎಂದು ಸಚಿವಾಲಯ ತಿಳಿಸಿದೆ.

ಆದರೆ ನಾನ್-ಇಸಿಆರ್ ಪಾಸ್‍ಪೋರ್ಟ್ ಹೊಂದಿದವರು ಸ್ವಇಚ್ಛೆಯಿಂದ ಸರಕಾರಿ ವೆಬ್ ತಾಣದಲ್ಲಿ ತಮ್ಮ ಹೆಸರು ನೋಂದಾಯಿಸಲು ಬಯಸಿದಲ್ಲಿ ಅವರು ಹಾಗೆ ಮಾಡಬಹುದು ಎಂದೂ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News